ನಂಜನಗೂಡು: ಹಂದಿ ಸಾಕಾಣಿಕೆಯ ನೆಪವೊಡ್ಡಿ ಗೋಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಹಂದಿಗಳ ದುರ್ವಾಸನೆಯಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ನಂಜನಗೂಡು ತಾಲ್ಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಾಲಯ ಮತ್ತು ಬಸವೇಶ್ವರ ದೇವಾಲಯದ ಬಳಿ ಗೋವುಗಳನ್ನು ಕಡಿದು ಗೋಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಚಿನ್ನದಗುಡಿಹುಂಡಿ ಗ್ರಾಮದ ಕೆರೆಯಲ್ಲಿ ಗೋಮಾಂಸವನ್ನು ತೊಳೆದು ಬೇರೆ ಕಡೆ ಮಾರಾಟ ಮಾಡಲಾಗುತ್ತಿದೆ.
ಕೆರೆಯ ಪಕ್ಕದಲ್ಲೇ ಇರುವ ಬೋರ್ವೆಲ್ ಗಳಿಗೆ ದನಗಳ ಮಾಂಸ ತೊಳೆದಿರುವ ಕಲುಷಿತ ನೀರು ಮತ್ತು ಹಂದಿಗಳು ವಾಸಿಸುವ ಕೊಳಚೆ ನೀರು ಕುಡಿಯುವ ನೀರಿಗೆ ಸೇರಿಕೊಳ್ಳುತ್ತಿದೆ. ಎರಡು ಬೋರ್ವೆಲ್ಗಳಿಂದಲೂ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಮಕ್ಕಳು ಮತ್ತು ಗ್ರಾಮಸ್ಥರು ಕಲುಷಿತ ನೀರನ್ನೇ ಕುಡಿಯುತ್ತಿರುವುದರಿಂದ ಗ್ರಾಮಸ್ಥರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ.
ಹಂದಿ ಸಾಕಾಣಿಕೆ ನೆಪದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದು, ಅಕ್ರಮವಾಗಿ ಹಂದಿ ಸಾಕಾಣಿಕೆ ಮಾಡುತ್ತಿರುವವರ ಬಗ್ಗೆ ಕ್ರಮ ಕೈಗೊಂಡು, ಎತ್ತಂಗಡಿ ಮಾಡುವಂತೆ ಬದನವಾಳು ಗ್ರಾಮ ಪಂಚಾಯಿತಿಗೆ ಎಷ್ಟೇ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅನುಮತಿ ಇಲ್ಲದೆ ಹಂದಿ ಸಾಕಾಣಿಕೆ ಮಾಡುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಮತ್ತು ದೇವಾಲಯಕ್ಕೆ ಬರುವ ಭಕ್ತರಿಗೆ ದುರ್ವಾಸನೆ ಬೀರುತ್ತಿದೆ.
ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ವಾಸನೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇದರಿಂದ ಮಹಿಳೆಯರು ಮಕ್ಕಳು ದೇವಾಲಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಕೂಡಲೆ ಹಂದಿ ಸಾಕಾಣಿಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಹಂದಿಗಳನ್ನು ಎತ್ತಂಗಡಿ ಮಾಡಬೇಕು. ಇಲ್ಲವಾದಲ್ಲಿ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುಂಡು ತುಂಡಾಗಿ ಕಟ್ಟು ಮಾಡಿದ ಗೋಮಾಂಸವನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

