ಮೈಸೂರು: ಪ್ರತಿಭಾವಂತ ಕಲಾವಿದರನ್ನು ಉತ್ತೇಜಿಸುವ ಮತ್ತು ಕಲಾತ್ಮಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ಸ್ಥಾಪಿಸಲಾದ ನೃತ್ಯ ವ್ಯಾಪಿನಿ ಕಲಾ ಸಂಸ್ಥೆಯು, ತನ್ನ ಎರಡನೇ ವಾರ್ಷಿಕೋತ್ಸವವನ್ನು ‘ಕಲಾ ಶ್ರೇಷ್ಠತೆಯತ್ತ ಪಯಣ’ ಎಂಬ ಅಡಿಬರಹದೊಂದಿಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಿತು.

ಈ ವಿಶೇಷ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಭರತನಾಟ್ಯ ಕಲಾವಿದರು ಮತ್ತು ನೃತ್ಯ ವ್ಯಾಪಿನಿ ಸಂಸ್ಥೆಯ ಸ್ಥಾಪಕಿ ಶ್ರೀಮತಿ ಸಿಂಧು ನಿರಂಜನ್ ಅವರ ಗುರುಗಳಾದ ವಿದ್ವಾನ್ ಶ್ರೀ ಸಂದೇಶ್ ಭಾರ್ಗವ್ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದ ನಂತರ, ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದವರು ಕಿರಾಳು ಮಹೇಶ್ ಅವರ ಅಭಿನವ ವೀರಗಾಸೆ ತಂಡ. ತಮ್ಮ ಅದ್ಭುತ ಪ್ರದರ್ಶನದ ಮೂಲಕ ತಂಡವು ಜಾನಪದ ಕಲೆಯ ವಿಶಿಷ್ಟತೆಯನ್ನು ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಪ್ರದರ್ಶಿಸಿತು.

ಇದೇ ವೇದಿಕೆಯಲ್ಲಿ ನೃತ್ಯ ವ್ಯಾಪಿನಿ ಕಲಾ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು. ವಸುಂಧರ ಶೈಲಿಯ ಭರತನಾಟ್ಯ ಮಾರ್ಗ ಪದ್ಧತಿಯ ಪ್ರಕಾರ, ಮಕ್ಕಳು ಮೇಳಪ್ರಾಪ್ತಿ, ಜತಿಸ್ವರ, ದೇವರನಾಮ, ಶಬ್ದಂ, ಪದವರ್ಣ, ಮತ್ತು ತಿಲ್ಲಾನಗಳನ್ನು ಅತ್ಯಂತ ಸೊಗಸಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಈ ವಾರ್ಷಿಕೋತ್ಸವವು ಸಂಸ್ಥೆಯ ಮುಂದಿನ ಕಲಾತ್ಮಕ ಪ್ರಯಾಣಕ್ಕೆ ಸ್ಪೂರ್ತಿ ತುಂಬಿತು.

