ತಿ.ನರಸೀಪುರ: ತಾಲ್ಲೂಕಿನ ತುಂಬಲ ಗ್ರಾಮದ ಪಿಎಂ ಶ್ರೀ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುರುಕುಲದ ಮಾದರಿಯಲ್ಲಿ ಅಕ್ಷರಭ್ಯಾಸ ಮಾಡಿಸುವ ಮೂಲಕ ವಿಭಿನ್ನವಾಗಿ ಶಾಲಾ ಪ್ರಾರಂಭೋತ್ಸವ ಮಾಡಿ ಮಕ್ಕಳನ್ನು ಸ್ವಾಗತಿಸಲಾಯಿತು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಮಕ್ಕಳನ್ನ ಆಟೋದಲ್ಲಿ ಶಾಲೆಗೆ ಬರಮಾಡಿಕೊಂಡರು. ಬೆಳಿಗ್ಗೆಯಿಂದ ಕಾರ್ಮೋಡ ಕವಿದ ವಾತಾವರಣ ಇತ್ತು. ಆಗೊಮ್ಮೆ ಈಗೊಮ್ಮೆ ಎಂಬಂತೆ ಚದುರಿದ ರೀತಿಯಲ್ಲಿ ಮಳೆ ಹನಿಗಳು ಉದುರುತ್ತಿದ್ದವು.
ಅದರ ನಡುವೆ ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ‘ಸ್ವಾಗತ ಮಕ್ಕಳೇ’ ಎಂದು ಹೇಳಿದಾಗ ಚಿಣ್ಣರ ಮೊಗದಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ. ಚಾಕಲೇಟ್ ಕೊಟ್ಟಾಗ ಅವರ ಸಂಭ್ರಮ ಇಮ್ಮಡಿಸಿತು. ಅದರಲ್ಲೂ ಕಳೆದೆರಡು ತಿಂಗಳ ನಂತರ ಸಹಪಾಠಿಗಳನ್ನು ಮೊದಲ ಬಾರಿ ಭೇಟಿ ಮಾಡಿದ ಪುಳಕ ಮನೆ ಮಾಡಿತ್ತು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸರಸ್ವತಿ ಪೂಜೆಯನ್ನು ನೆರವೇರಿಸುವುದರ ಜೊತೆಗೆ ಶಾಲೆಗೆ ಹೊಸದಾಗಿ ದಾಖಲಾದ ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಗುರುಕುಲದ ಮಾದರಿಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು.
ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಪಿಓ ಪ್ರಭುಸ್ವಾಮಿ ಹಾಗೂ ಶಿಕ್ಷಣ ತಜ್ಞ ಅಚ್ಯುತ್ ರಾವ್ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಕಲಿಕಾ ಸಾಮಗ್ರಿ ವಿತರಿಸಿದರು. ಕಾರ್ಯಕ್ರಮದಲ್ಲಿ ಭೂ ನ್ಯಾಯ ಮಂಡಳಿ ಸದಸ್ಯರಾದ ತುಂಬಲ ಅಂದಾನಿ ಮಾತನಾಡಿ, ಸರ್ಕಾರವು ಮಕ್ಕಳನ್ನ ಶಾಲೆಗೆ ದಾಖಲಿಸಿಕೊಳ್ಳಲು ವಯಸ್ಸಿನ ಮಿತಿಯನ್ನು ನಿಗದಿಪಡಿಸಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಿಕೊಳ್ಳಲು ಐದು ವರ್ಷ ಆರು ತಿಂಗಳ ನಿಯಮವು ಸರಿಯಾದ ಕ್ರಮವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ನಂದೀಶ್ ಸದಸ್ಯರಾದ ಗೋಪಾಲ್, ರಮೇಶ್, ಇಂದ್ರಮ್ಮ , ರಾಜೇಶ್ವರಿ, ಮಧುಕುಮಾರ್,ಸೌಮ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದರಾಜು ತುಂಬಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಧನಂಜಯ್, ಸಿ.ಆರ್.ಪಿ ಶ್ರೀಧರ್ ತುಂಬಲ ಶಾಲೆಯ ಮುಖ್ಯ ಉಪಾಧ್ಯಾಯರಾದ ರಾಯಪ್ಪ ಗೌಂಡಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

