ನಂಜನಗೂಡು: ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದೆಯನ್ನು ಉಳಿಸಿಕೊಳ್ಳುವ ಸಲುವಾಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಗೋವರ್ಧನ್ ಮತ್ತು ಸಹಚರರು ಪ್ರೀ ಪ್ಲಾನ್ ಮರ್ಡರ್ ಮಾಡಿದ ಘಟನೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು.

ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದೆಗೆ ನಡೆದ ಚುನಾವಣೆಯಲ್ಲಿ 20 ಸದಸ್ಯರ ಬೆಂಬಲದಿಂದ ಮೃತ ವ್ಯಕ್ತಿ ನಂಜುಂಡಸ್ವಾಮಿ ಎಂಬುವರ ಪತ್ನಿ ಸೌಭಾಗ್ಯ ಎಂಬವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯಿತು. ಸೌಭಾಗ್ಯ ಒಬ್ಬರೇ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ಬೇರೆ ಯಾರು ನಾಮಪತ್ರವನ್ನು ಸಲ್ಲಿಸದೆ ಇರುವ ಕಾರಣ ಸೌಭಾಗ್ಯ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಚುನಾವಣಾ ಅಧಿಕಾರಿ ಶಿಲ್ಪಾ ಘೋಷಣೆ ಮಾಡಿದರು.

ಸುಮಾರು 23 ಸದಸ್ಯರ ಬಲವನ್ನು ಹೊಂದಿರುವ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ನಡೆದ ಅಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ 20 ಸದಸ್ಯರು ಹಾಜರಿದ್ದು, ಮೂರು ಸದಸ್ಯರು ಗೈರಾಗಿದ್ದರು. ಬಳಿಕ ನೂತನ ಅಧ್ಯಕ್ಷೆ ಸೌಭಾಗ್ಯ ಮಾತನಾಡಿ, ಇನ್ನು ಬರೋಬರಿ 10 ತಿಂಗಳುಗಳ ಕಾಲ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಆಡಳಿತವನ್ನು ನಡೆಸಿ, ಎಲ್ಲ ಸದಸ್ಯರ ಬೆಂಬಲದಿಂದ ಗ್ರಾಮ ಪಂಚಾಯಿತಿಯ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುತ್ತೇನೆ.

ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಇದು ಮಾದರಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಪಣತೊಟ್ಟು ಕಾರ್ಯನಿರ್ವಹಿಸಲು ಮುಂದಾಗುತ್ತೇನೆ. ಇದು ಸತ್ಯಕ್ಕೆ ಸಿಕ್ಕ ಜಯ ಅಧ್ಯಕ್ಷ ಗಾದೆಯ ದುರಾಸೆಗಾಗಿ ಇಬ್ಬರ ನಡುವೆ ಒಪ್ಪಂದವಾಗಿದ್ದ ಮಾತನ್ನು ಕೂಡ ಕಳೆದುಕೊಂಡು ನನ್ನ ಪತಿಯನ್ನು ಬಲಿ ಪಡೆದುಕೊಂಡರು ಎಂದು ತಮ್ಮ ನೋವನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೈತ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಮ್ಮರಗಾಲ ಸೋಮಣ್ಣ‌ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು. ‌