ನಂಜನಗೂಡು: ರಾಜ್ಯ ಸರ್ಕಾರ ಸಫಾರಿ ಬಂದ್ ಮುಂದುವರಿಸಿ ರೈತರ ಪ್ರಾಣವನ್ನು ಉಳಿಸಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಎಚ್ಚರಿಕೆ ನೀಡಿದ್ದಾರೆ.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ರೈತರು ಮನವಿ ಸಲ್ಲಿಸಿದರು. ರೈತರ ಮೇಲೆ ಕಾಡುಪ್ರಾಣಿಗಳು ನಿರಂತರವಾಗಿ ದಾಳಿ ಮಾಡಿದ ಪರಿಣಾಮ ಜಿಲ್ಲೆಯಲ್ಲಿ ಹುಲಿ, ಚಿರತೆ, ಕಾಡಾನೆಗಳ ದಾಳಿಗೆ ರೈತರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಸಫಾರಿ ಬಂದ್ ಮಾಡಿ ಆದೇಶ ನೀಡಿತ್ತು. ಕಾಡಿನೊಳಗೆ ಪ್ರವಾಸಿಗರು ಸಫಾರಿ ಹೋಗುತ್ತಿದ್ದರು ಮತ್ತು ರೆಸಾರ್ಟ್ ಗಳಿಗೆ ಹೋಗುತ್ತಿರುವುದೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವುದಕ್ಕೆ ಮುಖ್ಯ ಕಾರಣವಾಗಿತ್ತು. ಇದರಿಂದ ರೈತರು ಹುಲಿ ದಾಳಿ ನಡೆಸಿ ಬಲಿ ಪಡೆದುಕೊಂಡಿತು. ಸಫಾರಿ ಬಂದ್ ಮಾಡುವಂತೆ ರೈತರು ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಸಫಾರಿ ಬಂದ್ ಮಾಡಿದ ಪರಿಣಾಮ ಕಾಡು ಪ್ರಾಣಿಗಳ ಹಾವಳಿ ಕಡಿಮೆಯಾಗಿದ್ದು, ರೈತರು ಮತ್ತು ರೈತರು ಬೆಳೆದ ಬೆಳೆ ರಕ್ಷಣೆಯಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಯಾವುದೇ ಕಾಡು ಪ್ರಾಣಿಗಳಿಂದ ರೈತರ ಮೇಲೆ ದಾಳಿ ನಡೆದಿಲ್ಲ. ಆದ್ದರಿಂದ ಸರ್ಕಾರ ಸಫಾರಿ ಬಂದ್ ಮಾಡಿರುವುದನ್ನು ಮುಂದುವರಿಸಬೇಕು. ರೆಸಾರ್ಟ್ ಮಾಲೀಕರ ಒತ್ತಡದಿಂದ ಸರ್ಕಾರ ಸಫಾರಿಯನ್ನು ಪ್ರಾರಂಭ ಮಾಡಬಾರದು. ಒಂದು ವೇಳೆ ಮತ್ತೆ ಸಫಾರಿಯನ್ನು ಮಾಡಲು ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಶಿರಮಳ್ಳಿ ಮಂಜುನಾಥ್, ಸಿಂಧುವಳ್ಳಿ ವೇಣುಗೋಪಾಲ್, ವೆಂಕಟೇಶ್, ಅಡಕನಹಳ್ಳಿ ಸ್ವಾಮಿ, ಉಪ್ಪನಹಳ್ಳಿ ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.