ನಂಜನಗೂಡು: ಜುಲೈ 1 ರಂದು ರಾಜ್ಯಾದ್ಯಂತ ಕಂದಾಯ ದಿನಾಚರಣೆ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಂದಾಯ ದಿನಾಚರಣೆಯನ್ನು ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲು ದೊಡ್ಡಕವಲಂದೆ ಕಂದಾಯ ಇಲಾಖೆ ಸಜ್ಜಾಗಿದೆ.
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂದಾಯ ದಿನಾಚರಣೆ ಮಾಡಲು ದೊಡ್ಡಕವಲಂದೆ ನಾಡ ಕಛೇರಿಯ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಮತ್ತು ಉಪ ತಹಶೀಲ್ದಾರ್ ಕಿರಣ್ ಕುಮಾರ್ ಈ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕರ ವಲಯದಲ್ಲಿ ಪ್ರಸಂಶೆಗೆ ಪಾತ್ರವಾಗಿದೆ.
ಹರಗನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ, ಮಕ್ಕಳ ದಾಖಲಾತಿ ಮತ್ತು ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಬಳಿಕ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರಿ ನೌಕರರು ಕೂಡ ಸಹಕರಿಸಬೇಕು. ಕಂದಾಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ನಾವು ನಿರ್ಧಾರ ಮಾಡಿದ್ದೇವೆ.
ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ತಟ್ಟೆ ಲೋಟ, ಕುಡಿಯುವ ನೀರಿನ ಬಾಟಲ್, ವಿದ್ಯಾಭ್ಯಾಸಕ್ಕಾಗಿ ಬ್ಯಾಗ್, ಸಮವಸ್ತ್ರ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುವುದು. ಹಾಗೂ ಮಕ್ಕಳನ್ನು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಲು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರು ಸೇರಿದಂತೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಕಿರಣ್ ಕುಮಾರ್, ಗ್ರಾ.ಪಂ ಸದಸ್ಯ ಸಿದ್ದಲಿಂಗಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾದ ಮೋನಿಕಾ, ಶೃತಿ, ರಾಜಮಣಿ, ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಬಸವರಾಜು, ದಕ್ಷಿಣ ಕಾಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ. ಶಿವಕುಮಾರ್ ಹಾಜರಿದ್ದರು.

