ಮೈಸೂರು: ಮರದ ಕೊಂಬೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಚಿರತೆ ಮರಿಯನ್ನು ಅರಣ್ಯ ಇಲಾಖೆ ರಕ್ಷಿಸಿರುವ ಘಟನೆ ಜಿಲ್ಲೆಯ ಕಪ್ಪಸೋಗೆಯಲ್ಲಿ ನಡೆದಿದೆ.

ರಕ್ಷಿಸಲ್ಪಟ್ಟ ಚಿರತೆ ಮರಿಯು ಐದಾರು ತಿಂಗಳ ಪ್ರಾಯದ್ದಾಗಿದ್ದು, ತಾಯಿಯಿಂದ ಬೇರ್ಪಟ್ಟ ಈ ಮರಿ ಕಪ್ಪಸೋಗೆ ಗ್ರಾಮದ ಪುಟ್ಟಯ್ಯ ಎಂಬುವರ ಜಮೀನಿನಲ್ಲಿ ಮರದ ಕೊಂಬೆಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿತ್ತು ಎನ್ನಲಾಗಿದೆ.

ಜಮೀನಿಗೆ ತೆರಳಿದ ಪುಟ್ಟಯ್ಯ ಅವರಿಗೆ ಮರದ ಕೊಂಬೆಗೆ ಸಿಕ್ಕಿ ಹಾಕಿಕೊಂಡಿದ್ದ ಚಿರತೆಮರಿ ಕಂಡಿದೆ. ಕೂಡಲೇ ಅವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಡಿ ಆರ್ ಎಫ್ ವಿನೋದ್. ವೈಶಾಖ. ಸುನಿಲ್.ನಾಗ. ಭೇಟಿ ಪರಿಶೀಲಿಸಿ ಚಿರತೆಮರಿಯನ್ನು ರಕ್ಷಿಸಿದ್ದಾರೆ.

ಚಿರತೆ ಮರಿ ಕಾಲಿಗೆ ಗಾಯವಾಗಿದ್ದು ಅದಕ್ಕೆ ಹೆಚ್ಚಿನ ಚಿಕಿತ್ಸೆಗೆ ಕೊಂಡೊಯ್ಯಲಾಯಿತು. ಮಾದಹಳ್ಳಿ ಗುಡ್ಡ ಸುತ್ತಮುತ್ತ ಚಿರತೆಗಳ ಹಾವಳಿ ಜಾಸ್ತಿ ಇದ್ದು ರಾತ್ರಿ ವೇಳೆ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಚಿರತೆಗಳ ಹಾವಳಿ ಜಾಸ್ತಿ ಇದ್ದು ಅರಣ್ಯ ಇಲಾಖೆಯವರು ಅವುಗಳನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.