ನಂಜನಗೂಡು: ಕಂಟೇನರ್ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಕವಲಂದೆ ಪೊಲೀಸರು ರಕ್ಷಿಸಿ ಮೈಸೂರಿನ ಪಿಂಜಾರಪೋಲ್ ಗೆ ರವಾನಿಸಿದ್ದಾರೆ.

ಬೆಳಿಗ್ಗೆ 9 ಗಂಟೆ ಸಮಯದಲ್ಲಿ ನಂಜನಗೂಡು ರಸ್ತೆಯಿಂದ ಬಂದ ಕಂಟೇನರ್ ವಾಹನವನ್ನು ಕವಲಂದೆ ಮತ್ತು ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಕವಲಂದೆ ಗ್ರಾಮದ ಸಮೀಪ ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಎಮ್ಮೆ, ಹಸು, ಎತ್ತು ಮತ್ತು ಕರುಗಳು ಸೇರಿ ಒಟ್ಟು 38 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.

ವಾಹನದ ಚಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ತಮಿಳುನಾಡಿನ ತಾಳವಾಡಿ ಕಡೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ. ಬಸವರಾಜು, ಸಿಬ್ಬಂದಿಗಳಾದ ಎಸ್.ಬಿ. ಜಿ.ಪಿ.ರಮೇಶ್, ಮಹದೇವಶೆಟ್ಟಿ, ರಮೇಶ್ ಹಾಜರಿದ್ದರು.