ನಂಜನಗೂಡು: ರಾಜ್ಯದಲ್ಲಿ ಸರ್ಕಾರ ನಡೆಸುವ ಸಾಮಾಜಿಕ ಹಾಗೂ ಆರ್ಥಿಕ ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸುವಂತೆ ನಂಜನಗೂಡು ತಥಾಗತ ಬುದ್ಧ ವಿಹಾರದ ಅಧ್ಯಕ್ಷ ಚಿನ್ನಂಬಳ್ಳಿ ಸಿ.ಆರ್ ಮಹದೇವು ಮನವಿ ಮಾಡಿದರು.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ದಲಿತಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ತಥಾಗತ ಬುದ್ಧ ವಿಹಾರ ನಂಜನಗೂಡು ಇವರ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಇದೇ ತಿಂಗಳ 22 ರಿಂದ ರಾಜ್ಯ ಸರ್ಕಾರ ಜಾತಿ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಅಂಬೇಡ್ಕರ್ ಅವರ ಅನುಯಾಯಿಗಳಾದ ನಾವು ಅಂಬೇಡ್ಕರ್ ರವರು ಹಿಂದೂ ಧರ್ಮವನ್ನು ತ್ಯಜಿಸಿ ನಮ್ಮ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಅಪ್ಪಿಕೊಂಡರು. ಹಾಗಾಗಿ ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗುತ್ತಾ ಅಂಬೇಡ್ಕರ್ ರವರ ಆಶಯದಂತೆ ನಮ್ಮ ಧರ್ಮಕ್ಕೆ ಮರಳಿ ಹೋಗಬೇಕಿದೆ.
ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಗೊಂದಲ ಉಂಟಾಗಿತ್ತು. ನಾವು ಜಾಗೃತಿ ಮೂಡಿಸುವಲ್ಲಿ ವಿಫಲರಾದ್ದೇವು. ಮುಂದೆ ನಡೆಯುವ ಸಮೀಕ್ಷೆಯಲ್ಲಿ ಧರ್ಮದ ಕಾಲಂ 6ರಲ್ಲಿ ಬೌದ್ಧ ಧರ್ಮ ಎಂದು ನಮೂದಿಸಿ ಪರಿಶಿಷ್ಟ ಜಾತಿಯ ಕಾಲಂನ ಉಪಜಾತಿಯಲ್ಲಿ ಹೊಲಯ ಎಂದು ಬರೆಸುವಂತೆ ಮನವಿ ಮಾಡಿದರು.
ನಂತರ ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ಈ ಹಿಂದೆ ನಡೆದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ನಮಗೆ ಅನ್ಯಾಯವಾಗಿದೆ. ಅತಿ ಹೆಚ್ಚಾಗಿ ರಾಜ್ಯದಲ್ಲಿ ಬಲಗೈ ಸಮುದಾಯ ವಾಸಿಸುತ್ತಿದೆ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜಾತಿಯನ್ನು ಹೇಳುವಲ್ಲಿ ಹಿಂಜರಿದ ಪರಿಣಾಮ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆ ಬಂದಿದೆ.
ಈ ಸಮೀಕ್ಷೆಯಲ್ಲಿ ಹಾಗೆ ಆಗಬಾರದು. ಈ ಹಿಂದೆ ನಮಗೆ ಹಿಂದೂ ಧರ್ಮ ಎಂದು ಬರೆಸಿದ್ದರು. ಹಿಂದೂ ಪದವನ್ನು ಬದಲಾವಣೆ ಮಾಡಿ ಇನ್ನು ಮುಂದೆ ಸಮೀಕ್ಷೆಯಲ್ಲಿ ಜನರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕು. ಪರಿಶಿಷ್ಟ ಜಾತಿಯ ಕಾಲಂ ನ ಉಪಜಾತಿಯಲ್ಲಿ ಹೊಲೆಯ ಎಂದು ನಮೂದಿಸಬೇಕು. ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಿದರೆ ಯಾವುದೇ ತೊಂದರೆಗಳು ಆಗುವುದಿಲ್ಲ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಮೀಸಲಾತಿ ಸಿಗಲಿದೆ ಆದ್ದರಿಂದ ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಥಾಗತ ಬುದ್ಧ ವಿಹಾರದ ಅಧ್ಯಕ್ಷ ಚಿನ್ನಂಬಳ್ಳಿ ಸಿಆರ್ ಮಹದೇವು, ಕಾರ್ಯದರ್ಶಿ ಸಿಎಂ ಅಂಕಯ್ಯ, ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಜನಸಂಗ್ರಾಮ ಪರಿಷತ್ ರಾಜ್ಯ ಗೌರವಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್, ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ, ದಸಂಸ ತಾಲ್ಲೂಕು ಸಂಚಾಲಕ ಶಂಕರಪುರ ಸುರೇಶ್ ಹಾಜರಿದ್ದರು.

