ಮೈಸೂರು: ದೇಶದಲ್ಲಿ ಧರ್ಮ, ಸಂಸ್ಕೃತಿ, ದಾಸೋಹ ಉಳಿಯಲು ಮಠ ಮಾನ್ಯಗಳು ಕಾರಣವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮೈಸೂರು ತಾಲೂಕಿನ ಜಯಪುರ ಹೋಬಳಿಯ ಬರಡನಪುರ ಗ್ರಾಮದಲ್ಲಿ ಶ್ರೀ ಮಹಾಂತೇಶ್ವರ ಮಠದ ವತಿಯಿಂದ ಭಾನುವಾರ ಅಯೋಜಿಸಿದ್ದ ಪಟ್ಸ್ಥಲ ಬ್ರಹ್ಮೋಪದೇಶ ಪೂರ್ವಕ ಪಟ್ಟಾಧಿಕಾರ ಮಹೋತ್ಸವ ಮತ್ತು ಶ್ರೀ ಮಹಾಂತೇಶ್ವರ ಮಂಗಳ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ಥಕ ಬದುಕಿಗೆ ಧರ್ಮವೇ ಅಡಿಗಲ್ಲಾಗಿದೆ. ಧರ್ಮವೆಂದರೆ ಕೇವಲ ಆಚರಣೆ ಅಥವಾ ಪಂಥವಲ್ಲ. ಸತ್ಯದ ದಾರಿಯಲ್ಲಿ ಮಾನವ ಜೀವನ ಹಿಡಿದಿಡುವ ವೌಲ್ಯಗಳಾಗಿವೆ ಎಂದು ಬಣ್ಣಿಸಿದರು. ಪರತತ್ವದ ಅರಿವಿನ ಜತೆಗೆ ಧರ್ಮದ ಜೀವನ ಸಾರ್ಥಕತೆ ತಂದು ಕೊಡಲಿದೆ.
ಮಾನವನ ಆಂತರಿಕ ಶಾಂತಿ ನೆಮ್ಮದಿ ಕಾಪಾಡಲು ಧರ್ಮ ಸಹಾಯ ಮಾಡಲಿದೆ. ಕಾಯಕ ದಾಸೋಹದೊಂದಿಗೆ ಋಷಿ ಮುನಿಗಳು ತೋರಿದ ಸಾಧನೆಯ ಹಾದಿಯಲ್ಲಿ ನಡೆಯಬೇಕಿದೆ. ಕೇವಲ ಒಳ್ಳೆಯದನ್ನು ಮಾತ್ರ ನಿರೀಕ್ಷಿಸುವುದು ಸರಿಯಲ್ಲ. ಒಳಿತು ಕೆಡಕುಗಳ ಮಿಶ್ರಣವೇ ಜೀವನ. ನಮ್ಮ ಅಧ್ಯಾತ್ಮ ಪರಂಪರೆ ಶ್ರದ್ಧಾ ಕೇಂದ್ರಗಳು, ಗುರು ಅನುಗ್ರಹಗಳಿಂದ ಜೀವನದ ಕೆಡುಕುಗಳ ತೀವ್ರತೆ ಶಮನಗೊಳಿಸಿಕೊಳ್ಳಬೇಕು ಎಂದರು.
ನಾನು ಸಿಎಂ ಆಗಿದ್ದ ಅವಧಿಯಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಭಾಗ್ಯ ಲಕ್ಷ್ಮೀ ಬಾಂಡ್ ವಿತರಣೆ ಮಾಡಿದ್ದು, ಆ ಹೆಣ್ಣುಮಕ್ಕಳಿಗೆ ಹದಿನೆಂಟು ವರ್ಷವಾಗಿ ಬಾಂಡ್ ಹಣ ಸಿಗುವಂತೆ ಆಗಿದೆ. ಈ ಹಣದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡದೆ ಆಕೆಯ ಉನ್ನತ ಶಿಕ್ಷಣಕ್ಕೆ ವಿನಿಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಸ್ವಾಮೀಗಳಾದವರು ಶಾಶ್ವತವಲ್ಲ ಅವರು ಮಾಡಿದ್ದ ಕೆಲಸ ಮಾತ್ರ ಶಾಶ್ವತ ಎಂದು ಹೇಳಿದರು. ತುಮಕೂರಿನ ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗಸ್ವಾಮಿ ಮಾತನಾಡಿ, ಯಡಿಯೂರಪ್ಪ ಅವರು ಮಠಗಳ ಸೇವೆ ಯನ್ನು ಗುರುತಿಸಿದ್ದಾರೆ. ಬರಡನಪುರ ಮಠದ ಸ್ವಾಮಿ ಅವರು ಸಣ್ಣ ಪ್ರಮಾಣದಲ್ಲಿ ನಿರ್ಮಿಸಿದ್ದ ಈ ಮಠ ಅವರ ಶ್ರಮದಿಂದ ಹೆಮ್ಮರವಾಗಿದೆ. ರಾಜ್ಯದುದ್ದಕ್ಕೂ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮಠಗಳು ಕಾರಣವಾಗಿದೆ ಎಂದರು.
ಶಾಸಕ ಜಿ.ಟಿ.ದೇವೆಗೌಡ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾರ್ಗ ದರ್ಶನದಿಂದ ಮಠ ಮಾನ್ಯಗಳು ಶಿಕ್ಷಣ ಸೇವೆಯನ್ನು ನೀಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ವಕೀಲ ಸುರೇಶ್, ಸಾಹಿತಿ ಶಂಕರ್ ದೇವನೂರು, ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬ್ರಹ್ಮನ್ಮಠದ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮೈಸೂರಿನ ಕುಂದೂರು ಮಠದ ಡಾ.ಶರತ್ ಚಂದ್ರಸ್ವಾಮಿ, ಮಹದೇಶ್ವರ ಮಠದ, ವೀರಶೈವ ಮುಖಂಡ ಪೊನ್ನಾಚಿ ಮಹದೇವಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವ ಸ್ವಾಮಿ ಇದ್ದರು.

