ಮೈಸೂರು: ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನೀಡಲಾಗುವ ತಸ್ತಿಕ್ ವೇತನ ನೇರ ಖಾತೆಗೆ ಜಮಾವಣೆ ನೊಂದಣಿಗೆ ನಂಜರಾಜ ಬಹುದ್ದೂರ್ ಛತ್ರದಲ್ಲಿ ಚಾಲನೆ ನೀಡಲಾಗಿದ್ದು, ಅರ್ಚಕರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಆದೇಶದಂತೆ ಸುಮಾರು 300 ಕ್ಕೂ ಅಧಿಕ ಅರ್ಚಕರು ಹಾಗೂ ವರ್ಗದವರ ಖಾತೆಗೆ ಸೇವಾ ಸಿಂಧು ಮೂಲಕ ನೇರವಾಗಿ ಜಮಾವಣೆಗೊಳ್ಳುವ ನೋಂದಣಿ ಕಾರ್ಯಕ್ಕೆ ಮೈಸೂರು ಮುಜರಾಯಿ ತಹಸೀಲ್ದಾರ್ ವಿದ್ಯುತ್ ಲತಾ, ಕೆ.ಆರ್.ನಗರ ತಹಸೀಲ್ದಾರ್ ಚಂದ್ರಶೇಖರ್ ಅವರುಗಳ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ತಸ್ತಿಕ್ ವೇತನ ನೋಂದಣಿ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಶಿವರಾಜ್ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಅರ್ಚಕರು ಸೇವಾ ಸಿಂಧು ಮುಖಾಂತರ ನೊಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅರ್ಚಕರಲ್ಲಿ ಮನವಿ ಮಾಡಿದರು
ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ ಮಾತನಾಡಿ, ಅರ್ಚಕರಿಗೆ ಖಾತೆಗೆ ಸೇವಾ ಸಿಂಧು ಮೂಲಕ ನೇರವಾಗಿ ಜಮಾವಣೆಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದು ಅರ್ಚಕ ವರ್ಗಕ್ಕೆ ಸಂತಸ ತಂದಿದೆ ಹಾಗೂ ವಿಶೇಷವಾಗಿ ಸರ್ಕಾರದ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರಿಗೆ ಅರ್ಚಕರ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ರಘು, ಚೇತನ್ ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

