ನಂಜನಗೂಡು: ನಂಜನಗೂಡು ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಆವರಣದಲ್ಲಿ ನಂಜನಗೂಡು ದಲಿತ ಸಂಘಟನೆಗಳ ಒಕ್ಕೂಟದಿಂದ 207 ನೇ ಭೀಮಾ ಕೊರೆಗಾಂವ್ ಜನಜಾಗೃತಿ ಸಮಾವೇಶ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ. ವಿಜಯಕುಮಾರ್ ಭಗವಾನ್ ಬುದ್ಧನ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಪ್ರಗತಿಪರ ಚಿಂತಕ ಮುಕುಂದ ರಾಜ್ ಮಾತನಾಡಿದರು, ಒಂದು ಕಾಲದಲ್ಲಿ ದಲಿತರು, ಶೋಷಿತರು ಇವರೆಲ್ಲರೂ ಪ್ರತಿಭಾವಂತ ರಾಗಿದ್ದರು. ಅವರಿಗೆಲ್ಲ ವಿದ್ಯೆ ಎನ್ನುವುದು ಸಿಕ್ಕಿದ್ದರೆ ದೇಶವು ಇಂದು ಮುಂದುವರೆಯುತ್ತಿತ್ತು.

ವಿದೇಶಿಗರು, ಬ್ರಿಟಿಷರು, ಡಚ್ಚರು ದೇಶಕ್ಕೆ ಕಾಲಿಡುತ್ತಿರಲಿಲ್ಲ. ಒಬ್ಬ ದಲಿತ ಐಎಎಸ್, ಐಪಿಎಸ್,ರಾಷ್ಟ್ರಪತಿ ಯಾಗುತ್ತಾನೆ ಎಂಬ ಹೊಟ್ಟೆ ಉರಿಯಿಂದ ಹಿಂಸೆಗೆ ಒಳಪಡಿಸುತ್ತಿದ್ದಾರೆ. ನಂಜನಗೂಡಿನಲ್ಲಿ ಚರಿತ್ರೆಯಲ್ಲಿ ಹೇಳುವಂತೆ ಸುಮಾರು 500 ಲಿಂಗಾಯಿತ ಸ್ವಾಮಿಗಳನ್ನು ಒಬ್ಬೊಬ್ಬರ ತಲೆಯನ್ನ ಕಡಿದು ಬಾವಿಗೆ ಎಸೆಯಲಾಗಿತ್ತು ಎಂಬುದು ಡಾ, ಎಂ.ಜಿ ನಾಗರಾಜು ಎಂಬುವರು ಕರ್ನಾಟಕ ರೈತ ಹೋರಾಟಗಳು ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಸಂಶೋಧನೆಗಳು ನಡೆದರೆ ಸತ್ಯ ಸತ್ಯತೆ ತಿಳಿಯುತ್ತದೆ. ಲಿಂಗಾಯಿತರ ಮೇಲೆ ಇತ್ತೀಚೆಗೂ ಕೂಡ ಕೊಲೆಗಳು ನಡೆಯುತ್ತಿವೆ. ದೊಡ್ಡಮಟ್ಟದ ಜನಾಂಗಗಳನ್ನ ಕೊಂದು ಹಾಕಿದರೆ ಮಿಕ್ಕ ಜನಾಂಗಗಳು ಹೆದರುತ್ತವೆ ಎಂಬುದು ಇದರ ಉದ್ದೇಶವಾಗಿತ್ತು ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಜನ ಜಾಗೃತಿ ಸಮಾವೇಶ ರಥಕ್ಕೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಚಾಲನೆ ನೀಡಿದರು. ಜನಜಾಗೃತಿ ಸಮಾವೇಶದ ಜಾಗೃತಿ ರಥ ಜೂನಿಯರ್ ಕಾಲೇಜಿನಿಂದ ಪ್ರಾರಂಭಗೊಂಡು ನಗರದ ಪ್ರಮುಖ ರಾಷ್ಟ್ರಪತಿ ರಸ್ತೆಯಿಂದ ಹೊರಟು, ರಾಕ್ಷಸ ಮಂಟಪದ ಮೂಲಕ ಅಂಬೇಡ್ಕರ್ ಭವನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಹಲವು ಜಾನಪದ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು.

ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್, ರೈತ ಸಂಘ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಅಭಿ ನಾಗಭೂಷಣ, ಮಲ್ಲಹಳ್ಳಿ ನಾರಾಯಣ, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ಜಯಶಂಕರ್, ಯಶವಂತ್, ಶಂಕರಪುರ ಸುರೇಶ್, ಹಿರಿಯ ಹೋರಾಟಗಾರ ಬೊಕ್ಕ ಹಳ್ಳಿ ನಂಜುಂಡಸ್ವಾಮಿ, ಉಪಾಧ್ಯಕ್ಷ ಪುಟ್ಟಸ್ವಾಮಿ, ಪ್ರತಿಧ್ವನಿ ವೇದಿಕೆಯ ಅಧ್ಯಕ್ಷ ತ್ರಿನೇಶ್, ರೈತ ಸಂಘದ ಅಧ್ಯಕ್ಷ ಸತೀಶ್ ರಾವ್ ಸೇರಿದಂತೆ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.