ಗುಂಡ್ಲುಪೇಟೆ: ತಾಲೂಕಿನ ಚೆನ್ನಿಕಟ್ಟೆ, ಮದ್ದೂರು ಕಾಲೋನಿ ಸೇರಿದಂತೆ ಹಲವು ಗಿರಿ ಜನ ಹಾಡಿಗಳಲ್ಲಿ ವಾಸದ ಮನೆಗಳು ಶಿಥಿಲಗೊಳ್ಳುವ ಜೊತೆಗೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾಧ್ಯಕ್ಷ ಎನ್.ಸುರೇಶ್ ಆರೋಪಿಸಿದ್ದಾರೆ.

ತಾಲೂಕಿನಲ್ಲಿ ಗಿರಿಜನರು ವಾಸ ಮಾಡುವ ಹಾಡಿಗಳಲ್ಲಿ ಮನೆಗಳು ಶಿಥಿಲಗೊಂಡಿದ್ದು, ಕುಸಿದು ಬೀಳುವ ಹಂತ ತಲುಪಿದೆ. ಕಳೆದೊಂದು ತಿಂಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಮನೆ ಬಿದ್ದು ಅನಾಹುತ ಸಂಭವಿಸುವ ಆತಂಕ ಎದುರಾಗಿದೆ. ಅವಘಡ ಸಂಭವಿಸಿದೆ ಸರ್ಕಾರ, ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಮುಂದಾಗುವ ಅನಾಹುತಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಶಾಸಕರು, ಸಚಿವರು ಗಿರಿಜನರು ವಾಸ ಮಾಡುವ ಕಾಲೋನಿಗಳು, ಹಾಡಿಗಳಿಗೆ ಕೂಡಲೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಮದ್ದೂರು ಕಾಲೋನಿ ಸೇರಿದಂತೆ ಇನ್ನಿತರ ಕಡೆ ಉತ್ತಮ ರಸ್ತೆ ಇಲ್ಲದೆ ಮಳೆ ಬಂದರೆ ರಸ್ತೆಗಳು-ಕೇಸರುಗದ್ದೆಯಂತಾಗಿ ಓಡಾಡಲು ನಿವಾಸಿಗಳು ತುಂಬಾ ಕಷ್ಟಪಡುವಂತಾಗಿದೆ.
ಆದ್ದರಿಂದ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕು. ಗಿರಿಜನರಿಗೆ ಹೊಸ ಮನೆ ನಿರ್ಮಿಸಿಕೊಡಬೇಕು. ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಗಿರಿಜನರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

