ನಂಜನಗೂಡು: ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಅಭಾವವಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಸೋಮವಾರ ನಂಜನಗೂಡು ನಗರದಲ್ಲಿ ಹೆದ್ದಾರಿ ತಡೆದು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ನಂಜನಗೂಡು ನಗರದ ದೇವಿರಮ್ಮನಹಳ್ಳಿ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 766 ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಾಡ್ಯ ರವಿ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಕಂಡು ಬರುತ್ತಿದೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವು ಬ್ಯಾಂಕ್ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

ಅಂತರ್ಜಲ ಕುಸಿತದಿಂದ ಕೃಷಿ ಪಂಪ್‌ಸೆಟ್ ನೀರಾವರಿ ಪ್ರದೇಶಗಳಾದ ಕಬ್ಬು, ಬಾಳೆ, ಅರಿಶಿನ, ತೆಂಗು ಬೆಳೆಗಳ ಇಳುವರಿ ಕುಸಿದಿದೆ. ರಾಗಿ, ಜೋಳ, ಸೂರ್ಯಕಾಂತಿ, ಹತ್ತಿ ಬೆಳೆಗೂ ನಷ್ಟವಾಗಿದೆ. ರೈತರ ಪ್ರಾಥಮಿಕ ಕೃಷಿ ಪತ್ತಿನ ಸಾಲವನ್ನು ರಾಜ್ಯ ಸರ್ಕಾರ ಕೂಡಲೇ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ NDRF ಮತ್ತು SDRF ಮಾನದಂಡಗಳನ್ನು ಬದಲಾಯಿಸಿ ವೈಜ್ಞಾನಿಕ ಬೆಲೆ ನಷ್ಟ ಪರಿಹಾರವನ್ನು ಎಕರೆಗೆ ₹50,000ಕ್ಕೆ ಹೆಚ್ಚಿಸಬೇಕು. ಜೊತೆಗೆ ಸಕ್ಕರೆ ಕಾರ್ಖಾನೆಗಳು ಕಳೆದ ಸಾಲಿನ ಬಾಕಿ ಜೊತೆಗೆ ಸರ್ಕಾರದ ಆದೇಶದಂತೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ₹50 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಪ್ರತಿಭಟನಾಕಾರರು ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್ 2 ನಂದಕಿಶೋರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಮುದ್ದಹಳ್ಳಿ ಚಿಕ್ಕ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿರಮ್ಮನಹಳ್ಳಿ ಕುಮಾರ್, ಮರಿಸ್ವಾಮಪ್ಪ, ಗಣೇಶ್, ಮದನ್, ಹ.ರವಿ, ಎಂ.ಸೋಮಣ್ಣ ಸೇರಿದಂತೆ ರೈತರು ಭಾಗವಹಿಸಿದ್ದರು.