ನಂಜನಗೂಡು: ಸರ್ಕಾರಿ ಶಾಲಾ ಕಾಲೇಜುಗಳ ಆವರಣದಲ್ಲಿ ಆರ್ಎಸ್ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಕೋರಿ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ ಬೆದರಿಸುತ್ತಿರುವುದನ್ನು ಖಂಡಿಸಿ ನಂಜನಗೂಡಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಂಜನಗೂಡು ನಗರದ ಹುಲ್ಲಹಳ್ಳಿ ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಮಿತಿಯ ಎಸ್.ಸಿ ಘಟಕದ ಬ್ಲಾಕ್ ಅಧ್ಯಕ್ಷ ಉಪ್ಪನಹಳ್ಳಿ ಶಿವಣ್ಣ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಡಾ.ಅಂಬೇಡ್ಕರ್ ತತ್ವ–ಸಿದ್ಧಾಂತಗಳಲ್ಲಿ ಅಚಲ ನಂಬಿಕೆ ಇಟ್ಟವರು. ಜಾತಿರಹಿತ, ವರ್ಗರಹಿತ, ಶೋಷಣೆ ಮುಕ್ತ ಸಮಾಜ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಜಾತಿವಾದಿ–ದೇಶದ್ರೋಹಿಗಳು ಮಕ್ಕಳ ತಲೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಂಘಟನೆಯ ಚಟುವಟಿಕೆಯನ್ನು ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ನಿರ್ಬಂಧಿಸುವಂತೆ ಪತ್ರ ಬರೆದಿದ್ದನ್ನೆ ನೆಪವಾಗಿಟ್ಟುಕೊಂಡು ಸಚಿವ ಪ್ರಿಯಾಂಕ್ ತೇಜೋವಧೆ, ವೈಯಕ್ತಿಕ ನಿಂದನೆ ನಡೆಸಲಾಗುತ್ತಿದೆ.
ಇದು ಖಂಡನೀಯ. ‘ಭಾರತ ಬುದ್ಧ, ಬಸವಣ್ಣನ ದೇಶ. ಡಾ.ಅಂಬೇಡ್ಕರ್ ಬರೆದ ಸಂವಿಧಾನ ಈ ದೇಶದ ಜೀವಾಳ. 100 ವರ್ಷಗಳನ್ನು ಪೂರೈಸಿರುವ ಆರ್ಎಸ್ಎಸ್ ಸಂವಿಧಾನ ಹಾಗೂ ಅಂಬೇಡ್ಕರ್ ವಿರುದ್ಧ ನಿರಂತರವಾಗಿ ಮಾತನಾಡುತ್ತ ಬಂದಿದೆ. ದೇಶ ಕಟ್ಟುವುದಾಗಿ ಮಾತನಾಡುವ ಆರ್ಎಸ್ಎಸ್, ಯುವಕರ ಕೈಯಲ್ಲಿ ಲಾಠಿ ಯಾಕೆ ಕೊಡುತ್ತೆ? ಪ್ರಬುದ್ಧ ಭಾರತ ಕಟ್ಟುವ ಮನಸ್ಸಿದ್ದರೆ ಯುವಜನರ ಕೈಯಲ್ಲಿ ಪುಸ್ತಕ ಕೊಡಬೇಕಿತ್ತಲ್ಲ’
‘ಸಂವಿಧಾನ ತೆಗೆದು ಮನುಸ್ಮೃತಿ ತರುವುದು ಆರ್ಎಸ್ಎಸ್ ಹುನ್ನಾರ. ಹೀಗಾಗಿ ಸಂವಿಧಾನವನ್ನು ಪ್ರತಿಪಾದಿಸುವ ಸಚಿವ ಪ್ರಿಯಾಂಕ್ ಬೆಳವಣಿಗೆ ಸಹಿಸದೇ ಅವರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಲಾಗುತ್ತಿದೆ. ಸಮಾಜದಲ್ಲಿ ಕೆಟ್ಟ ಆಲೋಚನೆಗಳಿಗೆ ಬಿಜೆಪಿ ಹಾಗೂ ಆರ್ಎಸ್ಎಸ್ ಪುಷ್ಟಿಕೊಡುತ್ತಿದೆ. ಕೂಡಲೇ ಈ ರಾಜ್ಯ ಹಾಗೂ ದೇಶದಿಂದ ಆರ್ಎಸ್ಎಸ್ ನಿಷೇಧಿಸಬೇಕು. ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ನಂಜನಗೂಡು ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿಯಿಂದ ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿಯವರು ನಡೆಸುತ್ತಿರುವ ಜನಜಾಗೃತಿ ಹೋರಾಟಕ್ಕೆ ಸಹಿ ಸಂಗ್ರಹ ಅಭಿಯಾನಕ್ಕೆ ಸಹಿ ಸಂಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿಎಂ ಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಕೆ.ಮಾರುತಿ, ಯೂತ್ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷ ಚಂದನ್ ಗೌಡ, ತಾಲ್ಲೂಕು ಯೂತ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಎಸ್.ಸಿ ಘಟಕದ ಅಧ್ಯಕ್ಷ ಉಪ್ಪನಹಳ್ಹಿ ಶಿವಣ್ಣ, ರಾಜ್ಯ ಎಸ್.ಟಿ ಘಟಕದ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಳೇಪುರ ನಿರಂಜನ್, ಬದನವಾಳು ಸೋಮು, ಕುರಹಟ್ಟಿ ಜಗದೀಶ್, ಶಿವಪ್ಪ ದೇವಪ್ಪದೇವರು, ಹಲ್ಲರೆ ಮಹದೇವು, ರವಿ ಬ್ಯಾಳಾರುಹುಂಡಿ, ಬೆಳಲೆ ಮಹೇಶ್, ರಾಜು, ಶ್ರೀರಾಂಪುರ ಲೋಕೇಶ್, ಮಹದೇವಶೆಟ್ಟಿ, ಬೀರೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

