ನಂಜನಗೂಡು: ಸೂರಹಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಂಜನಗೂಡಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಂಜನಗೂಡು ನಗರದ ಕೆಎಸ್ಆರ್ಟಿಸಿ ನಂಜನಗೂಡು ಘಟಕದ ಮುಂಭಾಗದಲ್ಲಿ ಜಮಾಯಿಸಿದ ರೈತರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ಸುಗಳು ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, ವಿದ್ಯಾರ್ಥಿಗಳು ಐದು ಕಿಲೋಮೀಟರ್ ದೂರದ ತನಕ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೂರಹಳ್ಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಮಾಡಲು ನಂಜನಗೂಡಿನಿಂದ ಮುದ್ದಹಳ್ಳಿ, ನವಿಲೂರು, ಮಾರ್ಗವಾಗಿ ಕಸುವಿನ ಹಳ್ಳಿಗೆ ಹೋಗುವಂತಹ ಸಾರಿಗೆ ಬಸ್ ಗಳನ್ನು ಸೂರಹಳ್ಳಿ ಗ್ರಾಮಕ್ಕೂ ಬಿಡಬೇಕು ಎಂದು ಹಲವಾರು ಬಾರಿ ಜನಪ್ರತಿನಿಧಿಗಳು ಹಾಗೂ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಈ ಕೂಡಲೇ ಸೂರಹಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ರೈತರು ಪಟ್ಟು ಹಿಡಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಕಾರ್ಯದರ್ಶಿ ಉಪ್ಪಿನ ಹಳ್ಳಿ ದೇವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಸೂರಹಳ್ಳಿ ಗ್ರಾಮ ಘಟಕದ ಗೌರವಾಧ್ಯಕ್ಷ ಮಲ್ಲೇಶ್ ಶೆಟ್ಟಿ, ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಕೃಷ್ಣ, ಖಜಾಂಚಿ ಮರಿಸ್ವಾಮಿ, ಕಾರ್ಯದರ್ಶಿ ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ಸಿದ್ದರಾಜ ನಾಯಕ, ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

