ನಂಜನಗೂಡು: ಡಾ. ಹೆಚ್.ಸಿ ಮಹದೇವಪ್ಪ ರವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕೆಂದು ಆಗ್ರಹಿಸಿ ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಡಾ.ಹೆಚ್.ಸಿ ಮಹದೇವಪ್ಪ ರವರ ಅಭಿಮಾನಿಗಳ ಬಳಗ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರು ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತಿಲ್ಲ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ದಲಿತರಿಗೆ ಮಾತ್ರ ಮುಖ್ಯಮಂತ್ರಿ ಸ್ಥಾನ ಸಿಗುತ್ತಿಲ್ಲ. ಮಹದೇವಪ್ಪ ರವರು ಸರ್ಕಾರದಲ್ಲಿ ಸಾಕಷ್ಟು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ, ದೇಶದಲ್ಲಿ ಮಾದರಿ ಸಚಿವರಾಗಿದ್ದಾರೆ.
ಅಲ್ಲದೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯರವರಿಗೆ ಜೊತೆಯಾಗಿ ನಿಂತವರು ಡಾ.ಹೆಚ್. ಸಿ ಮಹದೇವಪ್ಪ ರವರು, ಎಲ್ಲ ಸಮುದಾಯವನ್ನು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹದೇವಪ್ಪ ರವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಬುಲೆಟ್ ಮಹದೇವಪ್ಪ ಮಾತನಾಡಿ, ಮಹದೇವಪ್ಪ ರವರು ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಿ ರಸ್ತೆಗಳ ರಾಜ ಎಂದು ಪ್ರಖ್ಯಾತಿ ಪಡೆದಿದ್ದಾರೆ. ಅಲ್ಲದೆ ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ನಾಡಿನ ಉದ್ದಗಲಕ್ಕೂ ಸಂವಿಧಾನದ ರಥವನ್ನು ಸಂಚರಿಸುವಂತೆ ಮಾಡಿ ಪ್ರತಿಯೊಂದು ಮಗುವಿನ ಬಾಯಲ್ಲೂ ಸಂವಿಧಾನದ ಪೀಠಿಕೆಯನ್ನು ಹೇಳುವಂತಹ ಕಾರ್ಯಕ್ರಮವನ್ನು ರೂಪಿಸಿ, ದೇಶದ ಗಮನವನ್ನು ಸೆಳೆದರು.
ನಂಜನಗೂಡು ಮತ್ತು ವರುಣ ಸೇರಿದಂತೆ ನಮ್ಮ ಮೈಸೂರು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದಲಿತ ಸಮುದಾಯದ ಹಿರಿಯ ನಾಯಕರಾಗಿರುವ ಮಹದೇವಪ್ಪ ರವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿದರು.
ತಾಂಡವಪುರ ಮೋಹನ್ ಕುಮಾರ್ ಮಾತನಾಡಿ, ಡಾ.ಹೆಚ್.ಸಿ ಮಹದೇವಪ್ಪ ರವರು ದಲಿತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಸುಮಾರು ವರ್ಷಗಳಿಂದಲೂ ದಲಿತ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರದಲ್ಲಾದರೂ ದಲಿತ ಸಿಎಂ ಮಾಡಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಮಹದೇವಪ್ಪ ರವರು ಅರ್ಹ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕು.
ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 6 ಸ್ಥಾನಗಳು ಬರುವುದು ಕಷ್ಟವಾಗುತ್ತದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹದೇವಪ್ಪ, ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಇಂಧನ್ ಬಾಬು, ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಮೂಗಶೆಟ್ಟಿ, ಗಿರೀಶ್, ಕೆಂಪಣ್ಣ, ನಂದಕುಮಾರ್, ಗುರುಪಾದ ಸ್ವಾಮಿ, ಚೋಳರಾಜ್, ದೇವಿರಮ್ಮನಹಳ್ಳಿ ಬಸವರಾಜು, ರವಿಕುಮಾರ್, ರುದ್ರಸ್ವಾಮಿ, ಮಹದೇವಸ್ವಾಮಿ ಸೇರಿದಂತೆ ಡಾ.ಹೆಚ್.ಸಿ ಮಹದೇವಪ್ಪ ರವರ ಅಭಿಮಾನಿಗಳು, ಸುನೀಲ್ ಬೋಸ್ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

