ನಂಜನಗೂಡು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಾಗೂ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಬಲಪ್ರಯೋಗವನ್ನು ಖಂಡಿಸಿ ನಂಜನಗೂಡು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಭಾನುವಾರ ನಂಜನಗೂಡಿನಲ್ಲಿ ಕಪ್ಪು ಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ನಂಜನಗೂಡು ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ, ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಉಪ ವಿಭಾಗೀಯ ಸಂಚಾಲಕ ಮಂಜು ಶಂಕರಪುರ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಶಿಕ್ಷಣ ವ್ಯವಸ್ಥೆಯ ವಿಶ್ವಾಸವನ್ನೇ ಬುಡಮೇಲು ಮಾಡಿದ ಅತಿದೊಡ್ಡ ಹಗರಣ. ಇದರಿಂದ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ನೋವಿನ ಸಂಗತಿ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ, ಆದರೆ, ಅವರ ಸಂಸತ್ ಸ್ಥಾನವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಧ್ವನಿ ಹತ್ತಿಕ್ಕುವ ಪ್ರಯತ್ನ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ನೀಟ್ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ, ಬಂಧನದಂತಹ ದಮನಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಪ್ರಶ್ನೆ ಕೇಳುವವರನ್ನು ಬೆದರಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಶೋಭೆಯಲ್ಲ ಎಂದು ಅವರು ಆರೋಪಿಸಿದರು.
ನೀಟ್ ಪರೀಕ್ಷೆಗೆ ಗ್ರಾಮೀಣ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಿಸುತ್ತಾರೆ. ಪೋಷಕರು ಅಪಾರ ತ್ಯಾಗ ಮಾಡುತ್ತಾರೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳು ನುಚ್ಚುನೂರಾಗುತ್ತಿವೆ. ತಪ್ಪಿತಸ್ಥರ ವಿರುದ್ಧ ಕಠಿಠ ಕ್ರಮ ಕೈಗೊಂಡು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಶ್ರೀನಿವಾಸ್ ಕಂದೇಗಾಲ, ತಾಲ್ಲೂಕು ಸಂಚಾಲಕರಾದ ನಟರಾಜ್, ಸುರೇಶ್, ರವಿ, ಸುರೇಶ್ ಡಿ.ಸಿ, ಅರ್ಜುನ್ ಬೆಳಗುಂದ, ಸಿದ್ದರಾಜು ಮಲ್ಲಹಳ್ಳಿ, ಸಿದ್ದರಾಜು ಅಂಬಲೆ, ಚಲುವರಾಜು, ಮಹದೇವಸ್ವಾಮಿ ಸೇರಿದಂತೆ ದಸಂಸ ಕಾರ್ಯಕರ್ತರು ಭಾಗವಹಿಸಿದ್ದರು.

