ನಂಜನಗೂಡು: ಕಪಿಲಾ ನದಿ ಹೆಚ್ಚುವರಿ ನೀರಿನಿಂದ ಬೆಳೆ ನಷ್ಟ ಉಂಟಾಗಿರುವ ರೈತರಿಗೆ ಪರಿಹಾರವನ್ನು ನೀಡುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಜಮಾಯಿಸಿ, ಧಿಕ್ಕಾರದ ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಕೇರಳದ ವೈನಾಡಿನಲ್ಲಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಬಿಡಲಾಗಿದೆ. ಕಾರಣ ಹುಲ್ಲಹಳ್ಳಿ, ರಾಂಪುರ ಬಯಲಿನಲ್ಲಿ 15 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ರೈತರು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಅತಿವೃಷ್ಟಿ ಅನಾವೃಷ್ಟಿಯಿಂದ ಆದ ಬೆಳೆ ನಷ್ಟಕ್ಕೆ ಮತ್ತು ಕಾಡುಪ್ರಾಣಿಗಳಿಂದ ಆಗುತ್ತಿರುವ ಪ್ರಾಣ ಹಾನಿಗೆ ಬಜೆಟ್ ನಲ್ಲಿ 10 ಸಾವಿರ ಕೋಟಿ ಪರಿಹಾರ ನಿಧಿ ಕಾಯ್ದಿರಿಸಬೇಕು. ರೈತರು ಒಂದು ಎಕರೆ ಭತ್ತ ಬೆಳೆಯಲು 25 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತಿದೆ. ಕನಿಷ್ಠ 50 ಸಾವಿರ ಪರಿಹಾರವನ್ನು ನೀಡಬೇಕು. ಸರ್ಕಾರಿ ಗೋಮಾಳ ಗೋಳನ್ನು ಸಂರಕ್ಷಿಸಿ, ಸಮೃದ್ಧವಾದ ಮೇವಿನ ಬೆಳೆಯನ್ನು ಬೆಳೆಯಲು ಪಶು ಸಂಗೋಪನಾ ಇಲಾಖೆ ಗಮನ ಹರಿಸಬೇಕು.

ಕಪಿಲಾ ನದಿ ಪ್ರವಾಹದಿಂದ ಪ್ರತಿವರ್ಷ ಹಾನಿಯಾಗುತ್ತಿದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಬಳಿಕ ಕಂದಾಯ ಸಚಿವರು, ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ರವರ ಮೂಲಕ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಇಮ್ಮವು ರಘು, ಶಂಕರ್ ನಾಯಕ, ಶ್ವೇತಾ, ಮಹದೇವ ನಾಯಕ, ಹೆಡ ತಲೆ ಮಹದೇವ ನಾಯಕ, ಯೋಗಿ, ಅಹಲ್ಯ ಸಿದ್ದರಾಜು, ರಂಗಸ್ವಾಮಿ ನಾಯಕ, ಕೃಷ್ಣ, ಸಿಂಧುವಳ್ಳಿ ಮಹದೇವ ನಾಯಕ, ತಿಮ್ಮನಾಯಕ, ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.