ಮೈಸೂರು: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಕೈಯಲ್ಲಿ ತೆಂಗಿನಕಾಯಿ ಚಿಪ್ಪು ಹಿಡಿದು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉತ್ತರ ಭಾರತಕ್ಕೆ ಬೆಣ್ಣೆ ನೀಡಿ, ದಕ್ಷಿಣ ಭಾರತದ ಬಿಜೆಪಿ ಸಂಸದರು ಹೆಚ್ಚಾಗಿರುವ ಕರ್ನಾಟಕಕ್ಕೆ ಸುಣ್ಣ, ಕೈಗೆ ಚಿಪ್ಪು ನೀಡಿದೆ. ನಿರಂತರವಾಗಿ ಸಾಕಷ್ಟು ಸಂಸದರನ್ನು ಗೆಲ್ಲಿಸಿ, ಸರ್ಕಾರ ರಚನೆಗೆ ಸಹಕಾರ ನೀಡುತ್ತಿರುವ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದು ದುರಂತ. ೨೦ ಸಂಸದರನ್ನು ಆಯ್ಕೆ ಮಾಡಿ ಕೇಂದ್ರಕ್ಕೆ ಕಳುಹಿಸಿದರೆ ಯಾರೂ ಸಹ ನೀರಾವರಿ ಯೋಜನೆ ಬಗ್ಗೆ ಚಕಾರ ಎತ್ತಲಿಲ್ಲ. ರಾಜ್ಯದಿಂದ ಆಯ್ಕೆಯಾಗಿ ಬೃಹತ್ ಕೈಗಾರಿಕಾ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಕುಡಿಯುವ ನೀರಿನ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ತಂದೆ ತರುತ್ತೇನೆ ಎಂಬ ಭರವಸೆ ಹುಸಿಯಾಯಿತು ಎಂದು ಕಿಡಿ ಕಾರಿದರು.
ಆಂಧ್ರಪ್ರದೇಶದ ವಿಶಾಖಪಟ್ಟಣ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ 11000 ಕೋಟಿ ರೂ ಅನುದಾನ ನೀಡಿದೆ. ಆದರೆ, ಕರ್ನಾಟಕದಲ್ಲಿರುವ ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಗೆ ಕವಡೆ ಕಾಸು ನೀಡಲಿಲ್ಲ. ಇದರ ಬಗ್ಗೆ ಕುಮಾರಸ್ವಾಮಿ ತುಟಿ ಬಿಚ್ಚಿಲ್ಲ. ಮಂಡ್ಯದಿಂದ ಗೆದ್ದು, ಮಂಡ್ಯ ಜನತೆಗೆ ಯಾವ ಯೋಜನೆಯನ್ನೂ ತಂದುಕೊಡಲಿಲ್ಲ ಎಂದು ದೂರಿದರು.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಭರಿಸುತ್ತಿರುವ ರಾಜ್ಯ ಕರ್ನಾಟಕ. ಆದರೆ, ಬಿಡುಗಡೆ ಆಗುತ್ತಿರುವ ಹಣ ಅತ್ಯಲ್ಪ. ಇದು ಎಷ್ಟರ ಮಟ್ಟಿಗೆ ಸರಿ. ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ೮ ಬಾರಿ ಬಜೆಟ್ ಮಂಡಿಸಿದರೂ ರಾಜ್ಯದ ಜನರ ಬಾಯಾರಿಕೆ ನೀಗಿಸುವ, ರೈತರ ಸಮಸ್ಯೆ ಬಗೆಹರಿಸುವ ಮಹದಾಯಿ ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಬೃಹತ್ ಕೈಗಾರಿಕೆಗಳು, ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸದಿರುವುದು ಕನ್ನಡ ನಾಡಿನ ವಿರೋಧಿ ನೀತಿಗೆ ಕೈಗನ್ನಡಿಯಾಗಿದೆ. ಸಂಸದರು ಇನ್ನಾದರೂ ಎಚ್ಚೆತ್ತು ಪಕ್ಷಾತೀತವಾಗಿ ಧ್ವನಿ ಎತ್ತುವ ಮೂಲಕ ರಾಜ್ಯಕ್ಕಾದ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಗುರುಬಸಪ್ಪ, ಗೋಪಿ, ಸಿದ್ದೇಗೌಡ, ಬಾಬು, ಸಿದ್ದಪ್ಪ, ಗೋವಿಂದರಾಜ್, ಸ್ವಾಮಿ, ಮನೋಹರ್, ಹರೀಶ್, ಮಾದಪ್ಪ, ಅರವಿಂದ, ಮದನ್, ಸ್ವಾಮಿ, ಚಿನ್ನಪ್ಪ, ಸುನಿಲ್, ಶಿವು ಸೇರಿದಂತೆ ಹಲವರು ಭಾಗವಹಿಸಿದ್ದರು.

