ಮೈಸೂರು: ಬಾಂಗ್ಲಾದೇಶ, ಭಾರತದಲ್ಲಿ ಹೆಚ್ಚುತ್ತಿರುವ ಕೋಮುವಾದ ವಿರೋಧಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
1971ರ ಬಾಂಗ್ಲಾದೇಶ ವಿಮೋಚನಾ ಚಳವಳಿಯಲ್ಲಿ, ಶೇಖ್ ಹಸೀನಾರನ್ನು ಪದಚ್ಯುತಗೊಳಿಸಿದ ಇತ್ತೀಚಿನ ವಿದ್ಯಾರ್ಥಿ ಬಂಡಾಯದಲ್ಲಿ ಮುಸಲ್ಮಾನರು ಮತ್ತು ಹಿಂದೂಗಳು ಪರಸ್ಪರ ಜತೆಗೆ ಜೀವಕೊಟ್ಟು ಹೋರಾಡಿದ್ದರು. ಆದರೆ, ಈಗ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಂತಹ ಘಟನೆಗಳು ವರದಿಯಾಗುತ್ತಿರುವುದು ನೋವಿನ ಸಂಗತಿ. ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಕೋಮುವಾದಿ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಕಿಡಿ ಕಾರಿದರು.
ಭಾರತದಲ್ಲಿ ಕೂಡ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ದಾಳಿ, ಹಲ್ಲೆಗಳು ನಡೆಯುತ್ತಿವೆ. 1992ರ ಡಿಸೆಂಬರ್ ೬ರಂದು ಸುಪ್ರೀಂಕೋರ್ಟ್ನಲ್ಲಿ ಮೊಕದ್ದಮೆ ನಡೆಯುತ್ತಿದ್ದ ವಿವಾದಿತ ಮಸೀದಿಯ ಕಟ್ಟಡವನ್ನು ಕೆಡವಿ, ಇಡೀ ದೇಶದಲ್ಲಿ ಕೋಮುವಾದ ಹರಡುವ ಪಿತೂರಿಯನ್ನು ಬಿಜೆಪಿ, ಸಂಘ ಪರಿವಾರ ಮಾಡಿತು. ಈಗ ಮತ್ತೆ ಇತರ ಮಸೀದಿಗಳಲ್ಲಿ ಇಂತಹ ವಿವಾದ ಹುಟ್ಟು ಹಾಕುತ್ತಿದೆ.
ಬಿಜೆಪಿ ಮತ್ತು ಮಿತ್ರ ಪಕ್ಷ ಅಧಿಕಾರದಲ್ಲಿರುವ ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಜನಾಂಗೀಯ ಕಲಹದಲ್ಲಿ ನೂರಾರು ಮಂದಿ ಬೇವ ಕಳೆದುಕೊಂಡಿದ್ದಾರೆ. ಬಾಂಗ್ಲಾದೇಶ ಮತ್ತು ಭಾರತ ಎರಡೂ ದೇಶಗಳ ಬಂಡವಾಳಶಾಹಿಗಳಿಗೆ ಜನರನ್ನು ಒಡೆದು ಆಳಲು ಕೋಮುವಾದ, ಜನಾಂಗೀಯ ದ್ವೇಷ, ಜಾತಿ ಕಲಹಗಳು ಬೇಕಾಗಿವೆ ಎಂದು ದೂರಿದರು.
ಎರಡೂ ದೇಶಗಳಲ್ಲಿ ಸಾಮಾನ್ಯ ಜನತೆ ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಮುಂತಾದ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಶೋಷಣೆ ಆಧಾರಿತ ಬಂಡವಾಳಶಾಹಿ ವ್ಯವಸ್ಥೆಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆಗಳ ವಿರುದ್ಧ ಜನರ ಆಕ್ರೋಶ ದಿಕ್ಕು ತಪ್ಪಿಸಲು ಆಳುವ ಬಂಡವಾಳಶಾಹಿ ಪಕ್ಷಗಳು ಕೋಮು ವಿಷಬೀಜವನ್ನು ಎಲ್ಲ ಧರ್ಮಗಳ ಜನರ ಮನಸ್ಸಿನಲ್ಲಿ ಬಿತ್ತುತ್ತಿವೆ. ದುಡಿಯುವ ಜನತೆ ಈ ಪಿತೂರಿ ಅರ್ಥ ಮಾಡಿಕೊಂಡು ತಮ್ಮ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಜೀವನದ ನೈಜ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಮುಂದೆ ಬರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಮುಖಂಡರಾದ ಎಂ.ಉಮಾದೇವಿ, ಚಂದ್ರಶೇಖರ್ ಮೇಟಿ, ಸಂಧ್ಯಾ.ಪಿ.ಎಸ್, ಯಶೋಧರ್, ಸೀಮಾ ಜಿಎಸ್,ಹರೀಶ್, ಸುನಿಲ್, ಬಸವರಾಜು, ಸುಮಾ, ಚಂದ್ರಕಲಾ, ಆಸಿಯಾ ಬೇಗಂ ಸೇರಿದಂತೆ ಹಲವರು ಭಾಗವಹಿಸಿದ್ದರು.

