ನಂಜನಗೂಡು: ತಾಲ್ಲೂಕಿನ ಹುಣಸನಾಳು ಗ್ರಾಮದ ಬಳಿ ಇರುವ ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಎಂಬ ವಿದ್ಯಾ ಸಂಸ್ಥೆ ಕಾನೂನು ಬಾಹಿರವಾಗಿ ಶಾಲೆಯನ್ನು ನಡೆಸುತ್ತಿದ್ದು, ಇದೇ ತಿಂಗಳ ಡಿಸೆಂಬರ್ 16ರಂದು ಶಾಲೆ ಮುಂಭಾಗ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಯುವ ಮುಖಂಡ ಎಂ.ಡಿ ಬಾಲರಾಜು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಎಂಬ ವಿದ್ಯಾ ಸಂಸ್ಥೆ ಒಂದರಿಂದ ಐದನೇ ತರಗತಿವರೆಗೆ ಮಾತ್ರ ರಾಜ್ಯ ಪಠ್ಯಕ್ರಮಕ್ಕೆ ಪರವಾನಾಗಿ ಪಡೆದು, ಐಸಿಎಸ್‌ಸಿ ಕೇಂದ್ರ ಪಠ್ಯಕ್ರಮ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಇತ್ತೀಚಿಗೆ 6ನೇ ತರಗತಿಗೆ ಪಾಠ ಮಾಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ.
ಶಿಕ್ಷಣ ಇಲಾಖೆಗೆ ಒಂದು ಶುಲ್ಕದ ಮಾಹಿತಿ ನೀಡಿ, ಪೋಷಕರಿಗೆ ಮತ್ತೊಂದು ಶುಲ್ಕದ ಪಟ್ಟಿ ನೀಡಿ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆಯ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಚೆ ಇಲಾಖೆ ಕೆಲಸದ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ತಿಂಗಳು ಪೋಷಕರು ಪ್ರತಿಭಟನೆ ಮಾಡಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸು ದಾಖಲು ಮಾಡುವಂತೆ, ಹಾಗೂ ಹೆಚ್ಚುವರಿ ಶುಲ್ಕ ವಾಪಸ್ ನೀಡುವಂತೆ ಡಿಡಿಪಿ ಐ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆದರೆ ಅದು ಕೂಡ ಶಾಲಾ ಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ. ಬಲವಂತವಾಗಿ ಆರನೇ ತರಗತಿ ವಿದ್ಯಾರ್ಥಿಗಳಿಗೆ ಟಿಸಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಖಾಸಗಿ ವಿದ್ಯಾಸಂಸ್ಥೆ ಜೊತೆ ಶಾಮೀಲಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು.
ವಂಚನೆ ಪ್ರಕರಣದಲ್ಲಿ ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಯ ಮುಖ್ಯಸ್ಥರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು. ಇನ್ನು ಮೂರು ದಿನಗಳ ಒಳಗೆ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಡಿಸೆಂಬರ್ 16ರ ಮಂಗಳವಾರ ಶಾಲೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪೋಷಕರಾದ ರುದ್ರೇಶ್, ಪವಿತ್ರ ಕುಮಾರ್, ಅಮರನಾಥ್, ಪ್ರಶಾಂತ್, ದೇವಪ್ಪ, ಗಣೇಶ್ ಗಿರೀಶ್ ಅಶೋಕ್,ಪ್ರಭು, ಸೇರಿದಂತೆ ಪೋಷಕರು ಹಾಜರಿದ್ದರು.

