ನಂಜನಗೂಡು : ಖಾಸಗಿ ಫೈನಾನ್ಸ್ ನಲ್ಲಿ ಪಾಲುದಾರನಾಗಿದ್ದ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ನಂಜನಗೂಡು ತಾಲೂಕು ಸಿಂಧುವಳ್ಳಿ ಗ್ರಾಮದ ಹರೀಶ್(28) ಮೃತ ದುರ್ದೈವಿ.ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿರುವ ಸಮೃದ್ದಿ ಫೈನಾನ್ಸ್ ನಲ್ಲಿ ಹರೀಶ್ ಪಾಲುದಾರರಾಗಿದ್ದರು. ಸ್ನೇಹಿತರೆಲ್ಲಾ ಸೇರಿ ಎರಡು ವರ್ಷಗಳ ಹಿಂದೆ ಫೈನಾನ್ಸ್ ಆರಂಭಿಸಿದ್ದರು. ಇತ್ತೀಚೆಗೆ ಮದುವೆ ನಿಶ್ಚಯವಾಗಿ ಮದುವೆಯ ಒಪ್ಪಂದ ಶಾಸ್ತ್ರವು ಕೂಡ ಆಗಿತ್ತು.
ಕೆಲವು ದಿನಗಳಿಂದ ಹಣದ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿದ್ದರೆಂದು ಹೇಳಲಾಗಿದೆ.ವಿದ್ಯಾರಣ್ಯಪುರಂ ಮಿಲ್ಕ್ ರಸ್ತೆಯಲ್ಲಿ ಫೈನಾನ್ಸ್ ಕಚೇರಿ ಆರಂಭಿಸಿ ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದರು. ಕಚೇರಿಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

