ನಂಜನಗೂಡು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಕುಟುಂಬವೊಂದು ಬೀದಿಗೆ ಬಿದ್ದ ಘಟನೆ ನಂಜನಗೂಡು ತಾಲ್ಲೂಕು ಹರದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ರೇವಮ್ಮ ಎಂಬುವರ ಮನೆಗೆ ಬೀಗ ಜಡಿದ ಪರಿಣಾಮ ಕಳೆದ 15 ದಿನಗಳಿಂದ ಮನೆ ಮುಂದಿನ ಜಗುಲಿಯೇ ಆಶ್ರಯವಾಗಿದೆ. ನಂಜನಗೂಡಿನ ತಹಶೀಲ್ದಾರ್ ಗೆ ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಯ ದೊರೆಯದಿದ್ದಲ್ಲಿ ವಿಷ ಸೇವಿಸುವುದಾಗಿ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ Equital small finance ನಲ್ಲಿ ಸೊಸೆ ರೇಖಾ ಹೆಸರಲ್ಲಿ ರೇವಮ್ಮ 3.15 ಲಕ್ಷ ಸಾಲ ಪಡದಿದ್ದಾರೆ. ಪ್ರತಿ ತಿಂಗಳು 7 ಸಾವಿರ ಕಂತು ಕಟ್ಟುತ್ತಿದ್ದಾರೆ. ಅನಾರೋಗ್ಯದ ನಿಮಿತ್ತ ಎರಡು ತಿಂಗಳು ಕಂತು ಕಟ್ಟಿಲ್ಲ. ಈ ಬಗ್ಗೆ ಫೈನಾನ್ಸ್ ಗೆ ತೆರಳಿ ಸಮಯಾವಕಾಶ ಕೇಳಿದ್ದಾರೆ ಅದಕ್ಕೆ ಒಪ್ಪದ ಬ್ಯಾಂಕ್ ಸಿಬ್ಬಂದಿಗಳು ರೇವಮ್ಮ ಮನೆಯಲ್ಲಿ ಇಲ್ಲದ ವೇಳೆ ಬಂದು ಬಾಗಿಲಿಗೆ ಬೀಗ ಜಡಿದು ನೋಟೀಸ್ ಅಂಟಿಸಿದ್ದಾರೆ.

ಹೀಗಾಗಿ ರೇವಮ್ಮ ಕುಟುಂಬಕ್ಕೆ ನೆಲೆ ಇಲ್ಲದೆ ಬೀದಿಗೆ ಬಿದ್ದಿದೆ.15 ದಿನಗಳಿಂದ ಮನೆ ಮುಂದಿನ ಜಗುಲಿ ಅಥವಾ ಅವರಿವರ ಮನೆಯಲ್ಲಿ ಮಲಗುವುವ ಪರಿಸ್ಥಿತಿ ಬಂದಿದೆ. ಇದೀಗ ಏಕಾ ಏಕಿ 2.60 ಲಕ್ಷ ಪಾವತಿಸುವಂತೆ ಒತ್ತಾಯಿಸಿದ್ದಾರೆಂದು ರೇವಮ್ಮ ಆರೋಪಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿ ಬ್ರೇಕ್ ಹಾಕಿದ್ದರೂ ಸಾಲಗಾರರಿಗೆ ಕಿರುಕುಳ ತಪ್ಪುತ್ತಿಲ್ಲ. ನ್ಯಾಯಕ್ಕಾಗಿ ರೇವಮ್ಮ ತಹಶೀಲ್ದಾರ್ ಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ವಿಷ ಸೇವಿಸುವುದೇ ದಾರಿ ಎಂದು ನಂಜನಗೂಡಿನ ತಹಶೀಲ್ದಾರ್ ಗೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದಾಗಿ ಇನ್ನಾದರೂ ರೇವಮ್ಮ ಕುಟುಂಬಕ್ಕೆ ನ್ಯಾಯ ದೊರೆಯುವುದೇ ಕಾದು ನೋಡಬೇಕಿದೆ …?.