ನಂಜನಗೂಡು: ಸಮೀಪದ ಮಲ್ಲನ ಮೂಲೆ ಕ್ಷೇತ್ರದಲ್ಲಿ ಮಂಗಳವಾರ ಸಿದ್ದಗಂಗಾ ಶ್ರೀಗಳ 118 ನೇ ಜನ್ಮದಿನ ಹಾಗೂ ಬಸವ ಜಯಂತಿ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಮಲ್ಲನ ಮೂಲೆ ಮಠಾಧ್ಯಕ್ಷರಾದ ಶ್ರೀ ಚನ್ನಬಸವ ಸ್ವಾಮೀಜಿಗಳು ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಬಳಿಕ ತಾಲೂಕು ವೀರಶೈವ ಘಟಕದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, 2025ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಇಂದು ಪೂರ್ವಭಾವಿ ಸಭೆಯನ್ನು ಸುಮಾರು ಒಂದುವರೆ ಸಾವಿರ ವೀರಶೈವ ಮುಖಂಡರ ಸಮ್ಮುಖದಲ್ಲಿ ಆಯೋಜನೆ ಮಾಡಲಾಗಿದೆ. ಬಸವ ಜಯಂತಿ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಗುತ್ತದೆ.

ಸುತ್ತೂರು ಶ್ರೀಗಳು ಗೊತ್ತುಪಡಿಸಿದ ದಿನಾಂಕ ಹಾಗೂ ಕಾರ್ಯಕ್ರಮ ನಡೆಸುವ ಬಗ್ಗೆ ತಿಳಿಸಿದ ನಂತರ ನಡೆಸಲಾಗುತ್ತದೆ. ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಈಶ್ವರ್ ಖಂಡ್ರೆ, ಶಂಕರ್ ಬಿದರಿ ರವರನ್ನ ಆಹ್ವಾನಿಸಲಾಗುತ್ತದೆ.

ಬಸವ ಜಯಂತಿ ಕಾರ್ಯಕ್ರಮ ನಂಜನಗೂಡಿನ ಶ್ರೀಕಂಟೇಶ್ವರ ಸ್ವಾಮಿ ದೇವಸ್ಥಾನದ ಕಲಾ ಮಂದಿರದಿಂದ ಹೊರಟು, ಆರ್‌ಪಿ ರಸ್ತೆಯ ಮೂಲಕ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ಕೊನೆಗೊಳ್ಳುತ್ತದೆ. ಸಮಾಜದ ಸುಮಾರು 20 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ. ಬಸವ ಜಯಂತಿಯ ಹಿಂದಿನ ದಿನ, ಹಾಗೂ ಬಸವ ಜಯಂತಿ ದಿನದಂದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದೆ. ಜಯಂತಿಗೆ ಆಗಮಿಸುವ ಎಲ್ಲರಿಗೂ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ಶ್ರೀ,ಚನ್ನಬಸವ ಮಹಾಸ್ವಾಮಿಗಳು, ತಾಲೂಕು ಅಧ್ಯಕ್ಷರು ಸಿಂಧುವಳ್ಳಿ ಕೆಂಪಣ್ಣ, ದೇವನೂರು ಶಿವಪ್ಪ ದೇವರು, ಉಪಾಧ್ಯಕ್ಷ ಶಿವಕುಮಾರ್, ರಾಜ್ಯ ಸದಸ್ಯ ಎಸ್ ಕೆ ಚನ್ನಪ್ಪ, ಜಿಲ್ಲಾ ಹುಲ್ಲಳ್ಳಿ ಮಾದಪ್ಪ ಮಂಜುನಾಥ್, ಕೋಮಲ ಸಿದ್ದಲಿಂಗ ಸ್ವಾಮಿ, ರಾಜೇಂದ್ರ, ಮಹದೇವಸ್ವಾಮಿ, ಅನಸೂಯ ಗಣೇಶ್, ಶಶಿಕಲಾ ಗಿರೀಶ್, ಗೀತಾ ರೇವಣ್ಣ, ಎನ್ ಸಿ ಬಸವಣ್ಣ, ಹುಳಿಮಾವು ಪರಶಿವಮೂರ್ತಿ, ಸುಧಾ, ಹೆಜ್ಜಿಗೆ ನಾಗೇಂದ್ರ, ಮಡಹಳ್ಳಿ ನಟರಾಜು, ಮಂಜೇಶ್ ಕುಮಾರ್, ಹಾಡ್ಯ ಮಹದೇವಸ್ವಾಮಿ, ಕಳಲೆ ನಂಜುಂಡಸ್ವಾಮಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಜರಿದ್ದರು.