ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ದೊಡ್ಡ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗೌತಮ ಪಂಚ ಮಹಾರಥೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ನಂಜನಗೂಡಿನ ಇತಿಹಾಸ ಪ್ರಸಿದ್ಧ ಶ್ರೀ ನಂಜುಂಡೇಶ್ವರಸ್ವಾಮಿಯ ದೊಡ್ಡಜಾತ್ರೆಯ ಅಂಗವಾಗಿ ಏ. 9 ರಂದು ಬುಧವಾರ ಮುಂಜಾನೆ ಗೌತಮ ಪಂಚಮಹಾರಥೋತ್ಸವ ಅತ್ಯಂತ ವಿಜೃಂಭಣೆ ಯಿಂದ ನೆರವೇರಲು ಸಕಲ ಸಿದ್ಧತೆಗಳು ಸಾಗಿದೆ.
ಅಂದು ಬೆಳಿಗ್ಗೆ 5 ರಿಂದ 5.40 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ರಥೋತ್ಸವ ನಡೆಯಲಿದ್ದು, ದೇಗುಲದ ಅರ್ಚಕ ವೃಂದ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಗಣಪತಿ ರಥಕ್ಕೆ ಮಹಾಮಂಗಳಾರತಿ ಮಾಡಿದ ನಂತರ ರಥಗಳು ಚಲಿಸಲಿವೆ.
ಮೊದಲಿಗೆ ಗಣಪತಿ ರಥ ನಂತರ ಶ್ರೀ ನಂಜುಂಡೇಶ್ವರ ರಥೋತ್ಸವ, ಪಾರ್ವತಿ ಅಮ್ಮನವರ ರಥ, ಸುಬ್ರಹ್ಮಣ್ಯ ರಥ, ಕೊನೆಯದಾಗಿ ಚಂಡಿಕೇಶ್ವರ ರಥಗಳು ಹೊರಡಲಿದ್ದು, ಈಗಾಗಲೇ 5 ರಥಗಳನ್ನು ದುರಸ್ತಿಗೊಳಿಸಿ, ಹೊಸ ಬಣ್ಣ ಬಳಿಯುತ್ತಿದ್ದಾರೆ. ರಥೋತ್ಸವಕ್ಕೆ ಇನ್ನೂ ಏಳು ದಿನಗಳು ಮಾತ್ರ ಬಾಕಿ ಉಳಿದಿದೆ. ದುರಸ್ತಿಗೊಂಡಿರುವ ರಥಗಳಿಗೆ ಹೊಸದಾಗಿ ಚಕ್ರವನ್ನು ಕೆತ್ತನೆ ಮಾಡಿ ಜೋಡಿಸಲಾಗುತ್ತಿದೆ.
ರಥವನ್ನು ಎಳೆಯಲು ಹೊಸ ಹಗ್ಗವನ್ನು ತರಿಸಲಾಗಿದ್ದು, ದೊಡ್ಡ ರಥಕ್ಕೆ ಕುದುರೆ ಕಟ್ಟಲು ಮುಂದಾಗಿದ್ದಾರೆ. ರಥ ಕಟ್ಟುವ ಕಾರ್ಯವು ಭರದಿಂದ ಸಾಗುತ್ತಿದೆ. ಗೌತಮ ಪಂಚ ಮಹಾ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ದೊಡ್ಡ ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾದು ಕುಳಿತಿದ್ದಾರೆ.

