ನಂಜನಗೂಡು: ಇಸ್ಪೀಟ್ ಅಡ್ಡೆಯ ಮೇಲೆ ಕವಲಂದೆ ಪೊಲೀಸರು ದಾಳಿ ಮಾಡಿ ನಗದು ಹಣ ಮತ್ತು 15 ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಆಡುತ್ತಿರುವ ಬಗ್ಗೆ ಬಾತ್ಮೀದಾರರು ನೀಡಿದ ಖಚಿತ ಮಾಹಿತಿಯ ಮೇರೆಗೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ನೇತೃತ್ವದ ತಂಡ ದಾಳಿ ನಡೆಸಿ 44,650 ಹಣವನ್ನು ವಶಪಡಿಸಿಕೊಂಡು ಆರು ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ಅಲ್ಲದೆ ದೇವನೂರು ಗ್ರಾಮದ ಯಾತ್ರಿ ಭವನದ ಬಳಿ ಇರುವ ನೀರು ಹರಿಯುವ ಸರ್ಕಾರಿ ಅಡ್ಡಹಳ್ಳದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸರು, ಪಣಕ್ಕಿಟ್ಟಿದ್ದ 11,420 ರೂ. ನಗದು ಮತ್ತು 09 ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಒಂದೇ ದಿನದಲ್ಲಿ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಎಸ್ಐ ಬಿ.ಬಸವರಾಜು ಮಿಂಚಿನ ಕಾರ್ಯಾಚರಣೆ ನಡೆಸಿ 15 ಮಂದಿ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ.
ಹೆಚ್ಚಾಗಿ ಅಕ್ರಮವಾಗಿ ಮದ್ಯ ಮಾರಾಟ, ಜೂಜಾಟ, ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅಕ್ರಮ ಮದ್ಯ ಮಾರಾಟ, ಜೂಜಾಟ ಕಂಡು ಬಂದರೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಎಸ್ಐ ಬಿ. ಬಸವರಾಜು ಎಚ್ಚರಿಕೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್.ಬಿ. ಜಿ.ಪಿ. ರಮೇಶ್, ಮಂಜು, ಚಂದ್ರು ರಾಜಶೇಖರ್, ಗಣೇಶ್, ರಮೇಶ್ ಇದ್ದರು.

