ನಂಜನಗೂಡು: ಮುಂಗಾರು ಕೈ ಕೊಟ್ಟ ಪರಿಣಾಮವಾಗಿ ಕಪಿಲಾ ನದಿಯ ಒಡಲು ಬರಿದಾಗಿದ್ದು ನೀರಿನ ಹರಿವು ತೀವ್ರ ಇಳಿಮುಖವಾದ ಹಿನ್ನಲೆ ಕಪಿಲೆ ಸೊರಗಿದ್ದಾಳೆ. ಇದರಿಂದಾಗಿ ನಂಜನಗೂಡಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ದೇವಾಲಯಕ್ಕೆ ಬರುವ ಭಕ್ತರ ಸ್ಥಾನಕ್ಕೂ ಕಪಿಲಾ ನದಿಯ ಸ್ನಾನಘಟ್ಟದಲ್ಲಿ ನೀರಿಲ್ಲದೆ ಬರೀ ಜೊಂಡು ಕೆಸರಿನಿಂದ ತುಂಬಿ ಬಣಗುಡುವಂತಾಗಿದೆ.

ಜೊತೆಗೆ ತನ್ನ ಮಡಿಲು ಸೇರಿರುವ ರಾಶಿ ರಾಶಿ ತ್ಯಾಜ್ಯವನ್ನ ಪ್ರದರ್ಶನಕ್ಕಿಟ್ಟು ಸೊರಗಿದ್ದಾಳೆ. ಇದನ್ನು ಕಂಡ ದೇವಾಲಯ ಆಡಳಿತ ಮಂಡಳಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿ ಜೆಸಿಬಿ ಯಂತ್ರದಿಂದ ತ್ಯಾಜ್ಯವನ್ನು ಹೊರ ತೆಗೆಯಲಾಗುತ್ತಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿಜೆ ಕೃಷ್ಣ ರವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದ್ದು, ಮೊದಲ ದಿನವೇ ನೂರಾರು ಟ್ರ್ಯಾಕ್ಟರ್ ತ್ಯಾಜ್ಯವನ್ನು ತೆರುವು ಮಾಡಲಾಗಿದೆ.

ಬಗೆದಷ್ಟೂ ತ್ಯಾಜ್ಯದ ರಾಶಿ, ಸಾವಿರಾರು ಟನ್ ಗಟ್ಟಲೆ ಕೊಳೆತ ಪದಾರ್ಥಗಳನ್ನ ಹೊರತೆಗೆಯಬೇಕಿದೆ. ನಗರದಿಂದ ಹರಿದು ಬರುವ ಕೊಳಚೆ ನೀರು, ಕೈಗಾರಿಕಾ ಪ್ರದೇಶದಿಂದ ಸೇರುವ ತ್ಯಾಜ್ಯ, ಭಕ್ತರಿಂದಾಗುವ ಅನೈರ್ಮಲ್ಯ ದಿಂದಾಗಿ ಕಪಿಲೆ ಸಂಪೂರ್ಣ ಮಲಿನವಾಗಿದ್ದಾಳೆ. ಪ್ರತಿವರ್ಷ ಇದೇ ಪುನರಾವರ್ತನೆ ಆಗುತ್ತಿದ್ದು ಹದಿನಾರು ಕಾಲು ಮಂಟಪದ ಬಳಿ ನೀರಿನ ಬದಲು ತ್ಯಾಜ್ಯದ್ದೇ ಕಾರುಬಾರಾಗಿದೆ.

ಎಷ್ಟೇ ಶುಚಿಗೊಳಿಸಿದರೂ ಮತ್ತೆ ಮತ್ತೆ ತ್ಯಾಜ್ಯ ಸಂಗ್ರಹವಾಗಿ ರೋಗದ ಭೀತಿಯನ್ನೂ ಸಹ ಕಪಿಲೆ ಸೃಷ್ಟಿಸುತ್ತಿದ್ದಾಳೆ. ಕೂಡಲೇ ಸರ್ಕಾರ ಕಪಿಲೆಯ ಶುಚಿತ್ವಕ್ಕಾಗಿ ಕ್ರಿಯಾ ಯೋಜನೆಯನ್ನ ಸಿದ್ದಪಡಿಸಿ ಸಂಪೂರ್ಣ ಜೊಂಡು ಮತ್ತು ತ್ಯಾಜ್ಯವನ್ನು ವಿಲೇವಾರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಪಿಲೆಯಲ್ಲಿ ಮಿಂದೇಳುವ ಭಕ್ತರು ಭಾರಿ ಸಮಸ್ಯೆ ಎದುರಿಸ ಬೇಕಾಗುತ್ತದೆ.

  • ಸಿಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.