ನಂಜನಗೂಡು: ಹುಲ್ಲಹಳ್ಳಿ ಗ್ರಾಮದ ಕಪಿಲಾ ನದಿಯ ಒಡಲಾಳದಿಂದ ಗುಂಡ್ಲುಪೇಟೆ ತಾಲ್ಲೂಕಿನ 136 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಆದರೆ, ದುರಂತ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಹುಲ್ಲಹಳ್ಳಿ ಗ್ರಾಮದ ಆರು ಮತ್ತು ಏಳನೇ ವಾರ್ಡಿನಲ್ಲಿ ಸತತ ಮೂರು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ.
ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಧರ್ ಎಂಬುವರ ಗಮನಕ್ಕೆ ಸಾಕಷ್ಟು ಬಾರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೂ ಗ್ರಾಪಂ ಆಡಳಿತ ಕ್ಯಾರೇ ಎಂದಿಲ್ಲ.
ಕಳೆದ ಮೂರು ನಾಲ್ಕು ತಿಂಗಳಿಂದ ಕುಡಿಯುವ ನೀರಿಗಾಗಿ ತೊಂದರೆ ಉಂಟಾಗಿದ್ದು, ನೀರಿಲ್ಲದೆ ಪರದಾಡುತ್ತಿದ್ದೇವೆ. ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ನಿವಾಸಿಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

