ನಂಜನಗೂಡು: “ಬೆಕ್ಕಿಗೆ ಚೆಲ್ಲಾಟ.. ಇಲಿಗೆ ಪ್ರಾಣ ಸಂಕಟ” ಎಂಬ ಗಾದೆ ಮಾತು ನಂಜನಗೂಡಿನ ಡಿ. ದೇವರಾಜ ಅರಸು ಸೇತುವೆ ವಿಚಾರದಲ್ಲಿ ಅಕ್ಷರಶಃ ನಿಜವಾಗುತ್ತಿದೆ. ಸೇತುವೆ ದುರಸ್ತಿ ಹೆಸರಿನಲ್ಲಿ ನಾಲ್ಕು ತಿಂಗಳ ಹಿಂದೆಯೇ ಹಳೆಯ ಸೇತುವೆಯನ್ನು ಬಂದ್ ಮಾಡಲಾಗಿದ್ದು, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಪರಿಣಾಮ ಮೈಸೂರು–ನಂಜನಗೂಡು–ಚಾಮರಾಜನಗರ–ಗುಂಡ್ಲುಪೇಟೆ ಸೇರಿದಂತೆ ತಮಿಳುನಾಡು ಮತ್ತು ಕೇರಳ ಸಂಪರ್ಕಿಸುವ ಪ್ರಮುಖ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಕಪಿಲಾ ನದಿಗೆ ಅಡ್ಡಲಾಗಿರುವ ಡಿ. ದೇವರಾಜ ಅರಸು ಸೇತುವೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಎರಡೂ ದಿಕ್ಕಿನ ವಾಹನಗಳ ಸಂಚಾರ ಒಂದೇ ಸೇತುವೆಯ ಮೇಲೆ ಅವಲಂಬಿತವಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿರುವುದರಿಂದ ಪದೇಪದೇ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕುವಂತಾಗಿದೆ.

ಕಾಮಗಾರಿ ಆರಂಭವಾಗದಿದ್ದರೂ ಸೇತುವೆ ಬಂದ್ ಮಾಡಿದ್ದೇಕೆ?
ನಾಲ್ಕು ತಿಂಗಳ ಹಿಂದೆ ಸೇತುವೆಯನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡ ಅಧಿಕಾರಿಗಳು, ಇದುವರೆಗೆ ಕಾಮಗಾರಿ ಆರಂಭಿಸದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ದುರಸ್ತಿ ಕಾಮಗಾರಿಗೆ ಬೇಕಾದ ಪೂರ್ವಸಿದ್ಧತೆ ಪೂರ್ಣಗೊಳಿಸದೇ ಸೇತುವೆ ಬಂದ್ ಮಾಡಿರುವುದು ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರವೇ ಎಂಬ ಆಕ್ರೋಶವೂ ಕೇಳಿಬರುತ್ತಿದೆ.

ಈ ಮಾರ್ಗದ ಸಂಚಾರದ ಮೇಲೆ ಅವಲಂಬಿತರಾಗಿರುವ ಕಾರ್ಖಾನೆ ಕಾರ್ಮಿಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ನಿತ್ಯ ಪ್ರಯಾಣಿಕರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರು ಕೂಡ ಟ್ರಾಫಿಕ್ ಜಾಮ್‌ನಿಂದ ಗಂಟೆಗಟ್ಟಲೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಆಂಬುಲೆನ್ಸ್‌ಗಳು ಟ್ರಾಫಿಕ್‌ನಲ್ಲಿ ಸಿಲುಕುತ್ತಿರುವುದು ಅತ್ಯಂತ ಗಂಭೀರ ವಿಚಾರ. ತುರ್ತು ಚಿಕಿತ್ಸೆಗೆ ತೆರಳಬೇಕಾದ ರೋಗಿಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದರೆ ಅದರ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಒಂದೆಡೆ ಸೇತುವೆ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿದೆ. ಮತ್ತೊಂದೆಡೆ ಪರ್ಯಾಯ ಸಂಚಾರ ವ್ಯವಸ್ಥೆಯ ಕೊರತೆಯಿಂದ ಸಾರ್ವಜನಿಕರ ಮೇಲೆ ನಿರಂತರ ಒತ್ತಡ ಬೀಳುತ್ತಿದೆ. ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ತ್ವರಿತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಜನರ ಸಂಕಷ್ಟಕ್ಕೆ ಕೊನೆಯೇ ಇಲ್ಲವೇ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್ ಹಾಗೂ ಶಾಸಕ ದರ್ಶನ್ ಧ್ರುವನಾರಾಯಣ್ ಪ್ರತಿನಿಧಿಸುವ ಕ್ಷೇತ್ರದಲ್ಲೇ ಇಂತಹ ಅವ್ಯವಸ್ಥೆ ಮುಂದುವರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಕಣ್ಣು ತೆರೆದು, ಸೇತುವೆ ದುರಸ್ತಿ ಕಾಮಗಾರಿಯನ್ನು ತಕ್ಷಣ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ವೈಜ್ಞಾನಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

“ಸೇತುವೆ ದುರಸ್ತಿ ಯಾವಾಗ ಆರಂಭವಾಗುತ್ತದೆ? ಕಾಮಗಾರಿ ಯಾವಾಗ ಮುಗಿಯುತ್ತದೆ? ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಯಾವಾಗ?” ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಉತ್ತರ ನೀಡಬೇಕಿದೆ.

-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು