ಮೈಸೂರು: ಸಂಗೀತ ಹಾಗೂ ಪ್ರದರ್ಶಕ ಕಲೆಗಳು ಸಮಾಜಕ್ಕೆ ಶಾಂತಿ ನೆಮ್ಮದಿ ಕೊಡುತ್ತವೆ. ಶ್ರೇಣಿಕೃತ ಸಮಾಜಕ್ಕೆ  ಸಮತೆಯನ್ನು ಕಲೆಗಳ ಮೂಲಕ ಧೈರ್ಯವಾಗಿ ಪ್ರದರ್ಶಿಸುವ ಚೈತನ್ಯ ಪ್ರತಿಯೊಬ್ಬರಿಗೂ ದೊರೆಯಬೇಕು ಎಂದು ಸಂಗೀತ  ನಿರ್ದೇಶಕ ಹಂಸಲೇಖ ಹೇಳಿದರು.

ನಗರದ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘದ ಸಹಯೋಗದಲ್ಲಿ ಪ್ರದರ್ಶಕ ಕಲೆ ಮತ್ತು ಮಾಧ್ಯಮ- ಸಾಂಸ್ಕೃತಿಕ ದೃಷ್ಟಿಕೋನಗಳು ಕುರಿತು ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಶ್ರೇಣಿಕೃತ ವ್ಯವಸ್ಥೆ ಎಂಬುದು ಸ್ಥಾವರ. ಚಲನಾ ಶಕ್ತಿ ಬರಬೇಕೆಂದರೆ ಎಲ್ಲವೂ ಬದಲಾಗಬೇಕು. ಸಮಾಜದ ಬದಲಾವಣೆಯಲ್ಲಿ ಕಲಾವಿದರ ಪಾತ್ರ ದೊಡ್ಡದಿದೆ ಎಂದು ಹೇಳಿದರು.

ಈಗಿನವರಿಗೆ ಭಾಗವಹಿಸಬೇಕೆಂಬ ಧೈರ್ಯವಿದ್ದರೂ ಸ್ಪಷ್ಟತೆ ಇರುವುದಿಲ್ಲ. ಬೆರೆಯುವ ಅವಕಾಶವಿದ್ದರೂ ಸಂಕೋಚ ಹೋಗಿ ರುವುದಿಲ್ಲ. ಕಲೆ ಕಲಿತವರು ಧೈರ್ಯವಾಗಿ ಪ್ರತಿಭೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ಹಿಮಾಲಯದ ಮಂಜು ಕರಗಿ ಗಂಗೆಯಾಗಿ ಗಂಗಾಬಾಯಿಯಾಗಿ ಮೈಸೂರಿನಲ್ಲಿ ಅವರು ಹರಿಯುತ್ತಿದ್ದಾರೆ. ಸಂಗೀತದ ಒಂದಷ್ಟು ತಂಪು-ಇಂಪು ಕಂಪನ್ನು ನಮ್ಮದಾಗಿಸಿಕೊಳ್ಳಬೇಕು ಎಂದುರು.

ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಬಿ.ಕೆ.ರವಿ ಮಾತನಾಡಿ, ಮಾಧ್ಯಮ ಮಾಹಿತಿ, ಶಿಕ್ಷಣದ ಜತೆಗೆ ಮನರಂಜನೆಯನ್ನೂ  ನೀಡುತ್ತಿದೆ. ಜಾಗತಿಕ ಮಾಧ್ಯಮದಲ್ಲಿ ಭಾರತೀಯ ಮಾಧ್ಯಮಗಳು ಶಕ್ತಿಯುತವಾಗಿ ಬೆಳೆಯಲು ಇಲ್ಲಿನ ಪಾರದರ್ಶಕ ಕಲೆಗಳೇ ಕಾರಣ ಎಂದರಲ್ಲದೆ, ಅಕ್ಷರ ವಂಚಿತ ಸಮುದಾಯದ ಪ್ರತಿಭೆಗಳಿಗೆ ಮೊದಲೆಲ್ಲ ವೇದಿಕೆಗಳೇ ಸಿಗುತ್ತಿರಲಿಲ್ಲ. ಸಂಗೀತ, ಪ್ರದರ್ಶಕ ಕಲೆಗಳ ಮೂಲ ಪ್ರಕಾರವನ್ನು ಉಳಿಸಿಕೊಳ್ಳುವ ನೈತಿಕ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಸಂಗೀತ ವಿ.ವಿ ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವೆ ರೇಖಾ ಹಾಜರಿದ್ದರು.