ಮೈಸೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆ ಅರಮನೆ ದೀಪಾಲಂಕಾರ ಮತ್ತು ಸಂಗೀತ ಕಾರ್ಯಕ್ರಮ ರದ್ದಾಗಿದೆ. ಈ ಮೂಲಕ ಈ ಬಾರಿಯ ಹೊಸ ವರ್ಷದ ಸಂಭಮಾಚರಣೆಗೆ ಕೊಂಚ ಬ್ರೇಕ್ ಬಿದ್ದಿದೆ.

ಪ್ರತಿ ವರ್ಷದಂತೆ ಈ ಬಾರಿಯ ವರ್ಷಾಂತ್ಯದಲ್ಲಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ಅರಮನೆ ಅಂಗಳದಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಬಾಣ ಬಿರಿಸುಗಳ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿತ್ತು. ವರ್ಷಾಂತ್ಯ ದಿನವಾದ ಡಿ.31ರ ರಾತ್ರಿ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ ಹಾಗೂ ಪಟಾಕಿ ಸಿಡಿಸುವ ಕಾರ್ಯಕ್ರಮವನ್ನೂ ರದ್ದುಗೊಳಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಅರಮನೆಯಲ್ಲಿ ಮಾಗಿ ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕಾರ್ಯಕ್ರಮ ಡಿ.31ರವರೆಗೆ ಇರಲಿದ್ದು, ಇದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಪ್ರವಾಸಿಗರು ಆಗಮಿಸಿ ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಸಾವು, ನಾಲ್ಕನೇ ಶನಿವಾರ ಹಾಗೂ ಭಾನುವಾರ ಸೇರಿದಂತೆ ಸಾಲು ಸಾಲು ರಜೆ ಇರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಮೈಸೂರಿನತ್ತ ಹರಿದುಬಂದಿದ್ದಾರೆ. ಒಂದೇ ಸಮನೆ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ವಾಹನಗಳ ದಟ್ಟಣೆಯೂ ಇದೆ. ನಗರಕ್ಕೆ ಪ್ರವೇಶ ನೀಡುವ ಟೋಲ್‌ಗಳಲ್ಲಿ ಮೈಲಿಗಟ್ಟಲೇ ವಾಹನಗಳು ಸಾಲಾಗಿ ನಿಲ್ಲುತ್ತಿವೆ. ಕಡಕೊಳದ ಬಳಿ ಇರುವ ಮೈಸೂರು-ಊಟಿ ಹೆದ್ದಾರಿಯ ಟೋಲ್‌ನಲ್ಲಿ ಎರಡು ಬದಿಯಲ್ಲೂ ವಾಹನಗಳ ಸಾಲು. ಟೋಲ್ ನೀಡಿ ಮುಂದಕ್ಕೆ ಸಾಗಲು ನಿಮಿಷಗಳೇ ಆಗುತ್ತಿದೆ.

ಇನ್ನೂ ಬೆಂಗಳೂರು ಹೈವೆಯಲ್ಲೂ ಇದೇ ಪರಿಸ್ಥಿತಿ. ಸರ್ವಿಸ್ ರಸ್ತೆಗಳಲ್ಲಿನ ಪರಿಸ್ಥಿತಿ ಹೇಳುವುದೇ ಬೇಡ. ಊರಾಚೆ ಈ ಪರಿಸ್ಥಿತಿಯಾದರೇ ಊರೊಳಗೆ ಇದಕ್ಕಿಂತಲೂ ಹೆಚ್ಚಿನ ಮಟ್ಟದ ದಟ್ಟಣೆ. ಮೃಗಾಲಯದ ಮುಂದಿನ ರಸ್ತೆಯಲ್ಲಂತೂ ಜನರೇ ತಿರುಗಾಡಲು ಆಗದಂತೆ ಆಗಿದೆ. ಅಲ್ಲಿ ಪಾರ್ಕಿಂಗ್ ಜಾಗ ಚಿಕ್ಕದಾಗಿರುವುದರಿಂದ ಪ್ರವಾಸಿಗರ ವಾಹನಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ. ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರೂ ಬಹುತೇಕ ಜನರಿಗೆ ಈ ಮಾಹಿತಿ ಕೊರತೆ ಕಾರಣ ಪಾರ್ಕಿಂಗ್ ಸಮಸ್ಯೆ ಬಹುವಾಗಿ ಕಾಡುತ್ತಿದೆ.

ಡಿಸೆಂಬರ್ ಕೊನೆಯಾಗಿರುವ ಕಾರಣ ಸರ್ಕಾರಿ ನೌಕರರು ಹಾಗೂ ಇನ್ನಿತರ ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮಗೆ ಇರುವ ರಜೆಯನ್ನು ಒಟ್ಟಿಗೆ ಹಾಕಿಕೊಂಡು ಪ್ರವಾಸಕ್ಕೆ ಬರುವುದು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಕೂಡಾ ಇದೇ ಸಮಯದಲ್ಲಿ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸುವುದರಿಂದ ವರ್ಷ-ವರ್ಷ ಈ ಸಮಯದಲ್ಲಿ ಮೈಸೂರಿನಲ್ಲಿ ಅಕ್ಷರಶಃ ಜನ ಜಾತ್ರೆಯೇ ನಡೆಯುತ್ತದೆ.