ನಂಜನಗೂಡು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಪಿ. ಶಿವಣ್ಣ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ವಾರ ಪ್ರಾಂಶುಪಾಲರಾಗಿ ನೇಮಕಗೊಂಡು ಬಂದಿರುವ ಶಿವಣ್ಣ ಅವರಿಗೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅದ್ದೂರಿ ಸ್ವಾಗತ ಕೋರಿ ಅಭಿನಂದಿಸಲಾಯಿತು.

ಹಿರಿಯ ವಿದ್ಯಾರ್ಥಿಗಳು ನೆಚ್ಚಿನ ಗುರುಗಳಿಗೆ ಮತ್ತು ನೂತನ ಪ್ರಾಂಶುಪಾಲರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ತಮ್ಮ ನೆಚ್ಚಿನ ಉಪನ್ಯಾಸಕರು ಮತ್ತೆ ಪ್ರಾಂಶುಪಾಲರಾಗಿ ಬಂದಿರುವುದಕ್ಕೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ನಂತರ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಡಿ. ಬಾಲರಾಜ್ ಮಾತನಾಡಿ, ಅವರು, 2007ರಲ್ಲಿ ಕಾಲೇಜು ಪ್ರಾರಂಭವಾದಾಗ ಶಂಕರನಂದ ಹಾಸ್ಟೆಲ್, ಹಂಚಿನ ಮನೆ, ಮರ-ಗಿಡದ ಕೆಳಗೆ ತರಗತಿ ನಡೆಯುತ್ತಿತ್ತು. ಕಟ್ಟಡ ಮತ್ತು ಮೂಲಭೂತ ಸೌಕರ್ಯ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಮೂಲಸೌಕರ್ಯಕ್ಕಾಗಿ ನಾವು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದ್ದೆವು. ಅದರ ಫಲವಾಗಿ ಇಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಮತ್ತು ದಿ. ಧ್ರುವ ನಾರಾಯಣ್ ಅವರ ಕೊಡುಗೆಯೂ ಇದೆ ಎಂದು ಸ್ಮರಿಸಿದರು.

ವಾಣಿಜ್ಯ ವಿಭಾಗದಲ್ಲಿ ಶಿವಣ್ಣ ರವರು 8 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದರು. ನಮ್ಮ ಕಾಲೇಜಿನ ನಾಡಿಮಿಡಿತ ಅವರಿಗೆ ತಿಳಿದಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದವರು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿರುವ ಈ ಕಾಲೇಜಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾರೆ ಎಂಬ ನಂಬಿಕೆ ಇದೆ. ಹಿರಿಯ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೂತನ ಪ್ರಾಂಶುಪಾಲರಾದ ಪಿ. ಶಿವಣ್ಣ ಮಾತನಾಡಿ, ನಾನು ಇದೇ ಕಾಲೇಜಿನಲ್ಲಿ 8 ವರ್ಷ ಸೇವೆ ಸಲ್ಲಿಸಿ ಬೇರೆ ಕಾಲೇಜಿಗೆ ಹೋಗಿದ್ದೆ. ಮತ್ತೆ ಇಲ್ಲಿಗೆ ಪ್ರಾಂಶುಪಾಲರಾಗಿ ಬಂದಿರುವುದು ಹೆಮ್ಮೆ. ಹಿರಿಯ ವಿದ್ಯಾರ್ಥಿಗಳ ಹೋರಾಟದಿಂದಲೇ ಇಂದು ಕಾಲೇಜು ಬೆಳೆದಿದೆ ಎಂದರು. ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಒಂದು ಕೊಠಡಿ ನೀಡಲಾಗುವುದು. ಕಾಲೇಜಿನಲ್ಲಿ ವಿಶೇಷ ತರಬೇತಿ ಮತ್ತು ಸ್ಟಡಿ ಕ್ಲಾಸ್ ಪ್ರಾರಂಭಿಸಿ, ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ. ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ನವೀನ್ ಕುಮಾರ್, ಹಿರಿಯ ವಿದ್ಯಾರ್ಥಿಗಳಾದ ದೇಬೂರು ಅಶೋಕ್, ಸುರೇಶ್, ಚೆಲುವಸ್ವಾಮಿ, ಮಂಜು, ರವಿಚಂದ್ರನ್, ಮೂರ್ತಿ, ಚಂದ್ರಶೇಖರ್, ಮಹೇಶ್, ಬೆಳಲೆ ಮಹೇಶ್, ಶ್ರೀನಿವಾಸ್, ಪ್ರತಾಪ್, ಸಿ.ಎಂ. ಸುಗಂಧರಾಜು, ಸಂಜಯ್, ಮನೋಜ್, ಕುಮಾರ್, ವಿನೋದ್, ಸಿದ್ದಾರ್ಥ್ ಸೇರಿದಂತೆ ಹಲವು ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.