ಮೈಸೂರು: ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಆಗುತ್ತಿದೆ. ಅದನ್ನು ಪ್ರಶ್ನೆ ಮಾಡುವ ಅಧಿಕಾರ ವಿಪಕ್ಷಗಳಿಗಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಒಳ್ಳೆಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಗ್ಯಾರಂಟಿಗಳಿಂದ ಒಬ್ಬ ಹೆಣ್ಣು ಮಗಳಿಗೆ ತಿಂಗಳಿಗೆ ನಾಲ್ಕೈದು ಸಾವಿರ ಉಳಿತಾಯ ಆಗುತ್ತದೆ. ಅದರ ಬಗ್ಗೆ ಟೀಕೆ ಮಾಡುವುದು ತಪ್ಪು ಎಂದರು.
ಕೊಪ್ಪಳದಲ್ಲಿ ವಿದೇಶಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಇದೊಂದು ಅಮಾನವೀಯ ಕೃತ್ಯ. ಈಗಾಗಲೇ ಅಲ್ಲಿನ ಎಸ್ಪಿಗೆ ಪತ್ರ ಬರೆದಿದ್ದೇನೆ. ಹಂಪಿಯನ್ನು ನೋಡಲು ಸಾಕಷ್ಟು ವಿದೇಶಿಗರು ಅಲ್ಲಿಗೆ ಬರುತ್ತಾರೆ. ಅಂತಹವರ ಮೇಲೆ ಹೇಯ ಕೃತ್ಯ ನಡೆಸಿದರೆ ಯಾವ ಸಂದೇಶ ಹೋಗುತ್ತದೆ.
ಇದೊಂದು ತಲೆ ತಗ್ಗಿಸುವ ಸಂಗತಿ. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಜತೆಗೆ ಅಲ್ಲಿರುವ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ಗಳನ್ನು ಬಂದ್ ಮಾಡಬೇಕು. ಅಲ್ಲಿಗೆ ಬರುವಂತಹ ವಿದೇಶಿಗರಿಗೆ ಹೆಚ್ಚಿನ ಭದ್ರತೆ ಕೊಡಬೇಕು ಎಂದು ಆಗ್ರಹಿಸಿದರು.
ಸೌಜನ್ಯ ಕೊಲೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿರುವ ಕುರಿತು ಪ್ರತಿಕ್ರಿಯಿಸಿ, ಸೌಜನ್ಯ ಕೊಲೆ ಪ್ರಕರಣ ಕುರಿತು ನ್ಯಾಯಾಲಯದಿಂದಲೂ ತೀರ್ಪು ಬಂದಿದೆ. ನಾನು ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಲು ಆಗುವುದಿಲ್ಲ.
ನಾನು ಮಾತ್ರ ಆ ಹೆಣ್ಣು ಮಗಳ ಪರವಾಗಿ ನಿಲ್ಲುತ್ತೇನೆ. ಆ ಪ್ರಕರಣದಲ್ಲಿ ಸಾವಿಗೀಡಾದ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವುದು ನನ್ನ ಆಶಯ. ಸಂತ್ರಸ್ತ ಕುಟುಂಬವನ್ನು ನಾನು ಭೇಟಿ ಮಾಡಿಲ್ಲ. ಧರ್ಮ ಸ್ಥಳಕ್ಕೆ ಹೋದಾಗ ಭೇಟಿ ಮಾಡುತ್ತೇನೆ ಎಂದರು.

