ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಇತ್ತೀಚೆಗೆ ಮೂವರು ವ್ಯಕ್ತಿಗಳು ಮದ್ಯ ಸೇವನೆ ಮಾಡಿದ್ದ ಕೇಸ್ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಮದ್ದೂರು ವಲಯ ಅರಣ್ಯಾಧಿಕಾರಿ ಡಿ. ಪುನೀತ್ ಅವರನ್ನು ಅಮಾನತುಗೊಳಿಸಲಾಗಿದೆ.
ರೌಡಿಶೀಟರ್ ಹಂಗಳದ ಮಹದೇವ ಪ್ರಸಾದ್, ಪಟ್ಟಣದ ಗಂಗಾಧರ್ ಹಾಗೂ ಕಗ್ಗಳದ ಚೇತನ್ ಅರಣ್ಯದ ಗಿಡ-ಮರಗಳಿರುವ ಕೋರ್ ವಲಯದಲ್ಲಿ ರಾಜಾರೋಷವಾಗಿ ಮದ್ಯಸೇವನೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.
ಈ ಫೋಟೋಗಳು ಹರಿದಾಡಿದ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ, ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಘಟನೆಯ ಬೆನ್ನಲ್ಲೇ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಂದೀಶ್ ಅವರು ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಎಸಿಎಫ್ ಸುರೇಶ್ ಅವರಿಗೆ ಆದೇಶಿಸಿದ್ದರು.
ಸಲ್ಲಿಕೆಯಾದ ಅಧಿಕೃತ ತನಿಖಾ ವರದಿಯ ಆಧಾರದ ಮೇಲೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ಲೇಗಿ ಅವರು ವಲಯ ಅರಣ್ಯಾಧಿಕಾರಿಯನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇಂತಹ ಬೇಜವಾಬ್ದಾರಿತನ ತೋರಿರುವುದಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

