ನಂಜನಗೂಡು: ನಗರದ ನಂದಿ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಎನ್ ಎಸ್ ಯುಐ ನಂಜನಗೂಡು ಘಟಕದ ವತಿಯಿಂದ “ವಿದ್ಯಾರ್ಥಿ ಧ್ವನಿ” ಎಂಬ ಶೀರ್ಷಿಕೆಯಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಪೂಜ್ಯ ತಂದೆಯವರಾದ ದಿ. ಆರ್. ಧ್ರುವನಾರಾಯಣ್ ಅವರು ಕೂಡ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯ ಮೂಲಕವೇ ರಾಜಕೀಯ ಪಯಣ ಆರಂಭಿಸಿದರು ಎಂದು ನೆನಪಿಸಿದರು.
ವಿದ್ಯಾರ್ಥಿ ನಾಯಕತ್ವದಿಂದ ಬೆಳೆದು ಸಮರ್ಥ ಸಂಘಟಕರಾಗಿ, ಜನರ ವಿಶ್ವಾಸ ಗಳಿಸಿ ಅವರು ಶಾಸಕರಾಗಿ, ಸಂಸದರಾಗಿ ಸೇವೆ ಸಲ್ಲಿಸಿದರು. ಎನ್ಎಸ್ ಯುಐ ಕೇವಲ ಸಂಘಟನೆ ಅಲ್ಲ, ಇದು ರಾಜಕೀಯ ನಾಯಕರನ್ನು ಬೆಳೆಸುವ ಮಹತ್ವದ ವೇದಿಕೆ. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ, ಸಮಾಜಮುಖಿ ಚಿಂತನೆ ಮತ್ತು ಜನಸೇವೆಯ ಮೌಲ್ಯಗಳನ್ನು ರೂಪಿಸುವ ಶಕ್ತಿ ಈ ಸಂಘಟನೆಗೆ ಇದೆ ಎಂದು ಹೇಳಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿದ್ಯಾರ್ಥಿಗಳ ನಿಜವಾದ ಧ್ವನಿಯಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರ ಹಕ್ಕುಗಳ ರಕ್ಷಣೆಗಾಗಿ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಕರೆ ನೀಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜ್, ಜಿಲ್ಲಾ ಮಹಿಳಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್ ಉಪಸ್ಥಿತರಿದ್ದರು. ಎನ್ಎಸ್ ಯುಐ ರಾಜ್ಯ ಉಪಾಧ್ಯಕ್ಷ ರಫೀಕ್ ಆಲಿ, ಪ್ರಧಾನ ಕಾರ್ಯದರ್ಶಿ ಲೋಕೇಶ್, ನೂತನ ಅಧ್ಯಕ್ಷ ಮಹಮ್ಮದ್ ಉಸ್ಮಾನ್, ಉಪಾಧ್ಯಕ್ಷ ರಾಜೇಂದ್ರ ಸೇರಿದಂತೆ ನಂದಕುಮಾರ್, ನಾಗರಾಜಯ್ಯ, ಶಶಿರೇಖಾ ಮತ್ತಿತರ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

