ನಂಜನಗೂಡು: ಬಾಲ್ಯ ವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟುವ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಅರಿವು ಕಾರ್ಯಕ್ರಮ ನಡೆಯಿತು.
ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ನಂಜನಗೂಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಿಳಿಗೆರೆ, ನಂಜನಗೂಡು ತಾಲ್ಲೂಕು ಹಾಗೂ ದಕ್ಷಿಣ ಕಾಶಿ ಚಾರಿಟಬಲ್ ಟ್ರಸ್ಟ್ ರಿ, ನಂಜನಗೂಡು ಇವರ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಳಿಗೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಅವರು, ಬಾಲ್ಯ ವಿವಾಹವು ಕೇವಲ ಕಾನೂನು ಬಾಹಿರವಷ್ಟೇ ಅಲ್ಲ, ಅದು ಮಕ್ಕಳ ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗುತ್ತದೆ ಎಂದು ತಿಳಿಸಿದರು.
18 ವರ್ಷದೊಳಗಿನ ಹುಡುಗಿ ಮತ್ತು 21 ವರ್ಷದೊಳಗಿನ ಹುಡುಗನ ಮದುವೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹದಿಂದಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ, ಪೌಷ್ಟಿಕಾಂಶದ ಕೊರತೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ.
ಇದರ ಜೊತೆಗೆ ಪೋಕ್ಸೋ ಕಾಯ್ದೆಯಡಿ 18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಕಠಿಣ ಶಿಕ್ಷೆಗೆ ಗುರಿಯಾಗುತ್ತದೆ. ನಮ್ಮ ಸುತ್ತಮುತ್ತ ಇಂತಹ ಪ್ರಕರಣಗಳು ನಡೆದರೆ ಹೆದರದೆ 1098 ಚೈಲ್ಡ್ ಲೈನ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಕ್ಕಳ ರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ, ಅದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಬಿ.ಮಂಜು ಮಾತನಾಡಿ, ಶಾಲಾ-ಕಾಲೇಜುಗಳು ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಮೊದಲ ಸಾಲಿನಲ್ಲಿ ನಿಲ್ಲಬೇಕು. ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಆತ್ಮೀಯವಾಗಿ ಬೆರೆಯಬೇಕು. ಯಾರ ಮನೆಯಲ್ಲಾದರೂ ಬಾಲ್ಯ ವಿವಾಹದ ಬಗ್ಗೆ ಚರ್ಚೆ ನಡೆದರೆ ಅದನ್ನು ಕೂಡಲೇ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಶಿಶು ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಲವು ಸೌಲಭ್ಯಗಳು ಇವೆ. ಹೆಣ್ಣು ಮಕ್ಕಳನ್ನು ಓದಿಸಿ, ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕವೇ ನಿಜವಾದ ದೇಶ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರಳ ಮಾತನಾಡಿ, ವಿದ್ಯಾರ್ಥಿಗಳೇ ನಮ್ಮ ದೇಶದ ಆಸ್ತಿ. ಬಾಲ್ಯದಲ್ಲೇ ಮದುವೆಯಾಗಿ ಅವರ ಚಿಕ್ಕ ಚಿಕ್ಕ ಕನಸುಗಳನ್ನು ಮುರಿಯುವುದು ಯಾವುದೇ ಸಮಾಜಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಓದಿ, ಬೆಳೆದು ಸಮಾಜಕ್ಕೆ ಕೊಡುಗೆ ನೀಡುವ ಪೂರ್ಣ ಸ್ವಾತಂತ್ರ್ಯ ಇರಬೇಕು. ನಮ್ಮ ಕಾಲೇಜು ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸಬಲರನ್ನಾಗಿ ಮಾಡಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹದ ಕಾನೂನು ಅಂಶಗಳು, ಅದರಿಂದಾಗುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು, ಮಕ್ಕಳ ಹಕ್ಕುಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಹಸೀನ ತಾಜ್, ಹಿರಿಯ ಉಪನ್ಯಾಸಕ ಸೋಮಶೇಖರ್, ದಕ್ಷಿಣ ಕಾಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಸಿ.ಎಂ ಸುಗಂಧರಾಜು, ಪ್ರಧಾನ ಕಾರ್ಯದರ್ಶಿ ಪಿ.ಮಹೇಶ್, ನಿರ್ದೇಶಕರಾದ ಸಿದ್ದಲಿಂಗಪ್ಪ, ಮಾಜಿ ಗ್ರಾಪಂ ಸದಸ್ಯ ನವೀನ್, ಕಾಲೇಜಿನ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

