ಮೈಸೂರು: ಬೇಲಿಯೊಳಗೆ ನವಜಾತ ಶಿಶು ಪತ್ತೆಯಾಗಿದೆ. ಆಗತಾನೆ ಹುಟ್ಟಿದ ಹೆಣ್ಣು ಮಗುವನ್ನು ಹೆತ್ತ ತಾಯಿ ಬಿಸಾಕಿ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಮಾಳ ಹಾಡಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇಂದು ಮುಂಜಾನೆ ಸ್ಥಳೀಯರ ಕಣ್ಣಿಗೆ ಮಗು ಬಿದ್ದಿದೆ.

ಕೂಡಲೇ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕಾರ್ಯೋನ್ಮುಖರಾದ ಸರ್ಕಲ್ ಇನ್ಸ್ಪೆಕ್ಟರ್ ಮುನಿಯಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಹೆಣ್ಣುಮಗುವನ್ನ ರಕ್ಷಿಸಿದ್ದಾರೆ. ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಶುಶ್ರೂಷೆ ಮಾಡಲಾಗುತ್ತಿದೆ. ಮಗುವಿನ ಕಟುಕ ತಾಯಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

