ಮೈಸೂರು: ಹೂಟಗಳ್ಳಿಯ ಟಿ.ಎಸ್.ವಿದ್ಯಾ, ನೆದರ್‌ಲ್ಯಾಂಡ್‌ಟಿ ರುಟ್ಗೆರ್ ವಚನ ಮಾಂಗಲ್ಯದ ಮೂಲಕ ಸತಿಪತಿಗಳಾದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶರಣರ ವಚನಗಳನ್ನು ಸ್ತುತಿಸಿ, ವಚನ ಪ್ರತಿಜ್ಞೆ ಮಾಡುವುದರ ಮೂಲಕ ಹೂಟಗಳ್ಳಿಯ ಸೋಮಶೇಖರಪ್ಪ ಮತ್ತು ಪ್ರೇಮ ಇವರ ಪುತ್ರಿ ಟಿ.ಎಸ್ ವಿದ್ಯಾ ಮತ್ತು ನೆದರ್‌ಲ್ಯಾಂಡ್ ಬಾಬ್‌ವಾನ್ ಬೊಇಜೆನ್ ಮತ್ತು ಜಾಕ್ವಿಲಿನ್ ಇವರ ಪುತ್ರ ರುಟ್ಗೆರ್ ಸತಿಪತಿಗಳಾದರು.
ವಿಜಯನಗರ ಎರಡನೇ ಹಂತದಲ್ಲಿರುವ ಸಂಭ್ರಮ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ವಚನ ಕಲ್ಯಾಣ ಮಹೋತ್ಸವ ಯಾವುದೇ ರಾಹುಕಾಲ, ಗುಳಿಕಕಾಲಗಳ ಸೋಂಕಿಲ್ಲದ, ಲಗ್ನ, ರಾಶಿ, ಕೂಟ, ಗಣ, ತಿಥಿ, ವಾರ, ನಕ್ಷತ್ರ ಮತ್ತು ಶಕುನಗಳ ಸುಳಿವಿಲ್ಲದಂತಹ ಶರಣರ ವಚನಾಧಾರಿತ ಕನ್ನಡ ವಿವಾಹವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.
ವಧು ವರರ ತಂದೆ ತಾಯಿ ವಚನ ಸ್ತುತಿಸಿ ವಿವಾಹಕ್ಕೆ ಒಪ್ಪಿಗೆ ನೀಡಿದರೆ, ವಧು ವರರು ಯಾವುದೇ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸದೆ, ವೈಚಾರಿಕ ಚಿಂತನೆ ಹೊಂದಿ, ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸುವುದಾಗಿ ಎಲ್ಲರ ಸಮ್ಮುಖದಲ್ಲಿ ವಚನ ಪ್ರತಿಜ್ಞೆ ತೆಗೆದುಕೊಂಡರು. ವರ ವಧುವಿಗೆ ಮಾಂಗಲ್ಯಧಾರಣೆ ಮಾಡಿದರೆ, ವಧು ವರನಿಗೆ ರುದ್ರಾಕ್ಷಿ ಧಾರಣೆ ಮಾಡುವುದರ ಮೂಲಕ ಸಮಾನತೆಯ ತತ್ವಕ್ಕೆ ವಚನ ಮಾಂಗಲ್ಯ ಸಾಕ್ಷಿಯಾಯಿತು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾ.ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಅವರು ಧ್ವಜಾರೋಹಣ ನೆರವೇರಿಸಿದರು. ಹೆಬ್ಬಾಳು ಮಲ್ಲೇಗೌಡ್ರು, ಜಾಕ್ವಿಲಿನ್, ಫೆಡ್ರಿಕ್, ಬಸಪ್ಪ, ಗಿರಿಜಮ್ಮ ಉಪಸ್ಥಿತರಿದ್ದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿಯವರು ಕನ್ನಡ ಮತ್ತು ಆಂಗ್ಲಭಾಷೆ ಎರಡರಲ್ಲೂ ವಚನಗಳನ್ನು ಅನುವಾದ ಮಾಡಿ ವಿವಾಹ ಮಾಡಿಸುವುದರ ಮೂಲಕ ಸಾವಿರಾರು ಜನರ ಗಮನ ಸೆಳೆದರು.

