ನಂಜನಗೂಡು: ನೆಸ್ಲೆ ಕಂಪನಿ ಕಾರ್ಮಿಕ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಾರ್ಖಾನೆ ಗುತ್ತಿಗೆದಾರ ಮೃತನ ಕುಟುಂಬಕ್ಕೆ 35 ಲಕ್ಷ ಪರಿಹಾರದ ಚೆಕ್ ನೀಡಿದ್ದಾನೆ. ಮೃತನ ಪತ್ನಿ ಪುಷ್ಪಾವತಿ ರವರಿಗೆ ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ. ಆದ್ರೆ ಆತ್ಮಹತ್ಯೆಗೆ ಮುನ್ನ ಕಾರ್ಮಿಕ ಬರೆದ ಡೆತ್ ನೋಟ್ ನಲ್ಲಿ ತನ್ನ ಆತ್ಮಹತ್ಯೆಗೆ ಕಾರಣ ಯಾರೆಂದು ಉಲ್ಲೇಖಿಸಲಾದ ಮೂವರ ವಿರುದ್ದ ಇದುವರೆಗೆ ಪ್ರಕರಣ ದಾಖಲಾಗಿಲ್ಲ.

ಘಟನೆ ನಡೆದು 48 ಗಂಟೆಗಳಾದ್ರೂ ಆರೋಪಿಗಳ ಸ್ಥಾನದಲ್ಲಿರುವ ಮೂವರು ವ್ಯಕ್ತಿಗಳ ಮೇಲೆ FIR ದಾಖಲಾಗದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸಹದ್ಯೋಗಿಗಳಾದ ದಿವ್ಯಶ್ರೀ,ರಾಘವೇಂದ್ರ ಹಾಗೂ ದಿನೇಶ್ ಎಂಬುವರು ನೀಡುತ್ತಿರುವ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಡೆತ್ ನೋಟ್ ನಲ್ಲಿ ಇನ್ಸ್ಪೆಕ್ಟರ್ ರವರಿಗೆ ಕಾರ್ಮಿಕ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ನೇರವಾಗಿ ಇನ್ಸ್ಪೆಕ್ಟರ್ ರವರಿಗೇ ಡೆತ್ ನೋಟ್ ಬರೆದಿದ್ದರೂ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಗುತ್ತಿಗೆದಾರ ಪರಿಹಾರದ ಚೆಕ್ ನೀಡಿದ್ರೆ ಆರೋಪಿಗಳ ತಪ್ಪು ಇಲ್ಲವೆಂದು ಅರ್ಥವೇ…? ಅಥವಾ ಹಣ ನೀಡುವುದೇ ಇಂತಹ ಪ್ರಕರಣಗಳಿಗೆ ಪರಿಹಾರವೇ…? ತನ್ನ ಸಾವಿಗೆ ನ್ಯಾಯ ಒದಗಿಸಬೇಕೆಂಬ ಮೃತನ ಮನವಿಗೆ ಬೆಲೆ ಇಲ್ಲವೇ…?.

ಈ ಹಿಂದೆ ನೆಸ್ಲೆ ಕಂಪನಿಯ ಕಾರ್ಮಿಕನೊಬ್ಬನಿಗೆ ಬಿಸಿ ನೀರು ಬಿದ್ದು ಸಂಪೂರ್ಣ ಮೈ ಸುಟ್ಟು ಹೋದ ಪ್ರಕರಣ ಇನ್ನೂ ಮಾಸಿಲ್ಲ.ಈತನಿಗೆ ಇದುವರೆಗೆ ಪರಿಹಾರ ದೊರೆತಿಲ್ಲ.ತಪ್ಪಿತಸ್ಥರ ವಿರುದ್ದ ಯಾವುದೇ ಕ್ರಮ ಜರುಗಿಲ್ಲ.ಕುಟುಂಬಸ್ಥರಿಗೆ ಉದ್ಯೋಗ ನೀಡುವುದಾಗಿ ನೀಡಿದ ಭರವಸೆ ಈಡೇರಿಲ್ಲ.ಇಂತಹ ಕಂಪನಿಗಳಲ್ಲಿ ನೌಕರರಿಗೆ ಸುರಕ್ಷತೆ ಎಲ್ಲಿದೆ.ಯಾವುದೇ ಅನಾಹುತಗಳ ನಡೆದರೂ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.ಹೀಗೆ ಅನ್ಯಾಯಕ್ಕೆ ಒಳಗಾದ ಕುಟುಂಬಗಳಿಗೆ ನ್ಯಾಯ ದೊರೆತಿಲ್ಲ.

ಇಂತಹ ಸಂಧರ್ಭಗಳಲ್ಲಿ ಪೊಲೀಸರ ಪಾತ್ರ ಬಹುಮುಖ್ಯ.ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡುವುದು ಪೊಲೀಸರ ಕರ್ತವ್ಯ.ಒಂದು ಪ್ರಕರಣಕ್ಕೆ ನ್ಯಾಯ ದೊರೆತರೆ ಮತ್ತೆ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ. ಪೊಲೀಸರೇ ಇನ್ನಾದ್ರೂ ಮೀನಾಮೇಷ ಎಣಿಸದೆ ತಪ್ಪು ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಂಡು ಮೃತನ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಿ.