ನಂಜನಗೂಡು : ಮೂರ್ನಾಲ್ಕು ತಲೆಮಾರುಗಳಿಂದ ಕೃಷಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ದೂಡುತ್ತಿದ್ದ ಬಡ ಕುಟುಂಬ ನೆರೆಹೊರೆಯವರು ದಿನನಿತ್ಯ ನೀಡುತ್ತಿರುವ ಕಿರುಕುಳದ ಸಂಕಷ್ಟ ತಾಳಲಾರದೆ ಇಡೀ ಕುಟುಂಬವೇ ಸಾಮೂಹಿಕ ಆತ್ಮಹತ್ಯೆಗೆ ನಿರ್ಧಾರ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಸಮೀಪವಿರುವ ಮಾದಯ್ಯನಹುಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಾದಯ್ಯನಹುಂಡಿ ಗ್ರಾಮದ ಗುರುಲಿಂಗಪ್ಪ ಎಂಬುವರು ಹದಿನಾರು ಗ್ರಾಮದ ಸರ್ವೆ ನಂಬರ್ 369ರಲ್ಲಿ ಎರಡು ಎಕರೆ ಕೃಷಿ ಭೂಮಿಯಲ್ಲಿ ಮೂರ್ನಾಲ್ಕು ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಕ್ಕ ಪಕ್ಕದ ಜಮೀನಿನವರು ಗುರುಮಲ್ಲಪ್ಪ ರವರ ಕೃಷಿ ಭೂಮಿಯನ್ನು ಕಬಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ವರ್ಷಗಳಿಂದಲೂ ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ.
ಈ ವಿಚಾರವಾಗಿ ನಂಜನಗೂಡಿನ ತಹಶೀಲ್ದಾರ್ ರವರ ಗಮನಕ್ಕೆ ತಂದು ಖುದ್ದಾಗಿ ತಹಶೀಲ್ದಾರ್ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಗಮನಿಸಿ ಯಾವುದೇ ತೊಂದರೆ ನೀಡದಂತೆ ನೆರೆಹೊರೆಯವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಹೀಗಿದ್ದರೂ ಕೂಡ ಅವರ ಚಾಳಿ ಬಿಡದ ನೆರವರೆಯವರು ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಬಿಳಿಗೆರೆ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಲಾಗಿದೆ.
ಇದರಿಂದ ಮನನೊಂದು ಬೇಸತ್ತಿರುವ ರೈತ ಗುರುಮಲ್ಲಪ್ಪ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ನಿರ್ಧಾರ ಮಾಡಿಕೊಂಡಿದ್ದಾರೆ. ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಡಾ.ಹೆಚ್ ಸಿ ಮಹದೇವಪ್ಪ ರವರ ಸ್ವಗ್ರಾಮದಲ್ಲಿ ರೀತಿಯ ಅನಾಹುತಕ್ಕೆ ನಿರ್ಧಾರ ಮಾಡಿಕೊಂಡ್ರು ಬಡ ಕುಟುಂಬಕ್ಕೆ ಇನ್ಯಾರು ನ್ಯಾಯ ಕಲ್ಪಿಸಿ ಕೊಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಅನಾಹುತ ಸಂಭವಿಸುವ ಮುನ್ನ ನಂಜನಗೂಡು ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ನ್ಯಾಯ ಒದಗಿಸಬೇಕಿದೆ.

