ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ನಂಜುಂಡೇಶ್ವರ ಸ್ವಾಮಿ ಮತ್ತು ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವವು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಇದರ ಅಂಗವಾಗಿ ಕಾಶಿಯಾತ್ರೆ ಹಾಗೂ ಧಾರಾ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ದೇವಾಲಯದ ವಸಂತ ಮಂಟಪದಲ್ಲಿ ಸಂಜೆ 6.20 ರಿಂದ 7ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಶ್ರೀಕಂಠೇಶ್ವರ ಸ್ವಾಮಿ ಮತ್ತು ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವವು ಹಲವು ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.
ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಆಷಾಢ ಮಾಸದಲ್ಲಿ ಜರುಗುವ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿದೇವಿ ಉತ್ಸವಮೂರ್ತಿಗಳಿಗೆ ದಿನವಿಡೀ ಧಾರ್ಮಿಕ ವಿಧಿವಿಧಾನಗಳು ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು.
ವಿದ್ಯುತ್ ದೀಪಾಲಂಕೃತದೊಂದಿಗೆ ಕಂಗೊಳಿಸುತ್ತಿರುವ ದೇವಾಲಯದಲ್ಲಿ ಕಲ್ಯಾಣ ಸಡಗರ ಕಳೆಗಟ್ಟಿತು. ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು. ಮಹೋತ್ಸವ ನಿರ್ವಿಘ್ನವಾಗಿ ಸಾಗಲು ಪ್ರಾತಃಕಾಲ ಮಹಾಗಣಪತಿ ಪೂಜೆ ಸಲ್ಲಿಸಲಯಿತು. ಬೆಳಿಗ್ಗೆ ಮೂಲದೇವರ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಕಳಶ, ಕನ್ನಡಿ ಹೊತ್ತು ಕಪಿಲಾ ಸ್ನಾನಘಟ್ಟದಲ್ಲಿ ಗಂಗೆ ಪೂಜೆ ನಂತರದಲ್ಲಿ ಮಂಗಳಸ್ನಾನ ಮಾಡಿಸಲಾಯಿತು. ಸಂಜೆ ನಾಂದಿ ಗ್ರಹಯಜ್ಞ, ಪುರಸನ, ನವಗ್ರಹ ಹೋಮ ಸೇರಿದಂತೆ ಸಕಲ ಪೂಜಾ ವಿಧಿವಿಧಾನವನ್ನು ಕೈಗೊಳ್ಳಲಾಯಿತು.
ಕಾಶಿಯಾತ್ರೆ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಯ ಉತ್ಸವಮೂರ್ತಿಯ ಮೆರವಣಿಗೆ ದೇವಾಲಯದ ಸುತ್ತ ಸಾಗಿ ಸ್ವಸ್ಥಾನಕ್ಕೆ ಮರಳಿತು. ಕಾಶಿಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಭಕ್ತಿಪರಾಕಾಷ್ಠೆ ಮೆರೆದರು. ಮಂಗಳ ವಾದ್ಯಗೋಷ್ಠಿ, ಸಪ್ತ ನಾದಸ್ವರದೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ಸಾಗಿತು. ಪಂಚ ವೀರಗಾಸೆ, ಪೂಜಾ ಕುಣಿತ, ನಂದಿಧ್ವಜ, ಕರಡಿ ಮೇಳ, ಬೀಸು ಕಂಸಾಳೆ, ತಮಟೆ, ವೀರಗಾಸೆ ಕುಣಿತ, ಗಾರುಡಿ ಗೊಂಬೆ ಕಲಾತಂಡಗಳ ಪ್ರದರ್ಶನ ಮೆರುಗು ಹೆಚ್ಚಿಸಿತು. ಸೇವಾರ್ಥದಾರರು ದಂಪತಿ ಸಮೇತವಾಗಿ ಕಂಚಿನ ಗದೆ ಹಿಡಿದು ಸಾಗಿದರು.
ಕಾಶಿಯಾತ್ರೆ ಬಳಿಕ ದೇವಾಲಯಕ್ಕೆ ಯದುವಂಶದ ಮಹಾರಾಜ ಕೊಡುಗೆಯಾಗಿ ನೀಡಿರುವ ಗಂಡ ಭೇರುಂಡ, ಟಿಪ್ಪು ಸುಲ್ತಾನ್ ಕೊಟ್ಟಿರುವ ವಜ್ರ ವೈಡೂರ‍್ಯ, ಶೃಂಗೇರಿ ಮಠದಿಂದ ಸಲ್ಲಿಸಿರುವ ಚಿನ್ನದ ಬಿಲ್ವ ಸರ ಸೇರಿದಂತೆ ಆಭರಣಗಳಿಂದ ಶ್ರೀಕಂಠೇಶ್ವರಸ್ವಾಮಿಯ ಉತ್ಸವಮೂರ್ತಿ ಸಿಂಗಾರಗೊಳಿಸಲಾಗಿತ್ತು.
ಸಂಜೆ 6.30ರಿಂದ 7.30ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಸಂಬಂಧ ಮಾಲಾ, ಅಕ್ಷತಾರೋಹಣ ಮುಹೂರ್ತ ನೆರವೇರಿತು. ಶ್ರೀಕಂಠೇಶ್ವರ ಉತ್ಸವಮೂರ್ತಿಯನ್ನು ಕಲ್ಯಾಣ ಮಂಟಪದಲ್ಲಿ ಹಾಗೂ ಪಾರ್ವತಿ ಅಮ್ಮನ ಮೂರ್ತಿಯನ್ನು ವಸಂತ ಮಂಪಟದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ಬಳಿಕ ಕಲ್ಯಾಣ ಮಂಟಪಕ್ಕೆ ಅಮ್ಮನ ಮೂರ್ತಿ ಪ್ರವೇಶವಾಯಿತು. ಬಳಿಕ ಧಾರಾ ಮಹೋತ್ಸವದೊಂದಿಗೆ ಕನ್ಯಾದಾನ ನೆರವೇರಿತು.
ರಾಜಾ ಹೋಮ, ಪ್ರಧಾನ ಹೋಮ, ಸಪ್ತಪದಿ, ಆರುಂಧತಿ ಪೂಜೆ ಸೇರಿದಂತೆ ಧಾರ್ಮಿಕ ವಿಧಾನಗಳನ್ನು ಪೂರ್ಣಗೊಳಿಸುವುದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು. ಮೈಸೂರು ಒಡೆಯರು ಹಾಗೂ ಟಿಪ್ಪು ಸುಲ್ತಾನ್ ನೀಡಿರುವ 44 ಬಗೆಯ ಜವಹಾರಿ ಅಭರಣಗಳಿಂದ ಉತ್ಸವಮೂರ್ತಿಗಳ ಅಲಂಕರಿಸುವುದು ಗಿರಿಜಾ ಕಲ್ಯಾಣದ ವಿಶೇಷಗಳಲ್ಲೊಂದಾಗಿದೆ, ಇಮ್ಮಡಿ ಕೃಷ್ಣರಾಜ ಒಡೆಯರ್ ಅವರು ನೀಡಿರುವ ಚಿನ್ನದ ರುದ್ರಾಕ್ಷಿ, ಬಿಲ್ವಪತ್ರೆ ಸರ, ತಂಗಮಣಿ, ರತ್ನ ಖಚಿತವಾದ ಉತ್ಸವ ಕವಚ,
ಕೆಂಪಿನ ಕವಚ, ಪದಕದ ಸರಗಳು, ಮುತ್ತಿನ ಹಾರಗಳು, ಸೂರ್ಯ ಬಪಟ್ಟು, ಚಂದ್ರ ಬೊಟ್ಟು, ಹಣೆ ಬೊಟ್ಟು, ತುರಾಯಿ, ಕಡಗ, ಕಾಲು ಕಡಗ, ಹವಣದ ಉಡುದಾರಗಳಿಂದ ಶ್ರೀಕಂಠೇಶ್ವರ ಸ್ವಾಮಿ ಮತ್ತು ಅಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದ ಖುತ್ವಿಕರು ಕ್ರಮಬದ್ದವಾಗಿ ಸಿಂಗರಿಸಿ ಕಲ್ಯಾಣ ಮಹೋತ್ಸವಕ್ಕೆ ಅಣಿಗೊಳಿಸುತ್ತಾರೆ, ಸರ್ಕಾರ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇರಿಸಲಾದ ಈ ಅಮೂಲ್ಯವಾದ ಮುತ್ತು, ಪಚ್ಚೆ, ವಜ್ರ, ಹವಳ, ಹಾಗೂ ನವರತ್ನಗಳಿಂದ ಕೂಡಿದ ಆಭರಣಗಳನ್ನು ದೇವಾಲಯದ ಸುಪರ್ದಿಗೆ ಪಡೆದು ಅಲಂಕಾರ ಮಾಡಲಾಗುವುದು.
ಸರ್ವ ಅಲಂಕಾರ ಭೂಷಿತ ಶ್ರೀಕಂಠೇಶ್ವರ ಮತ್ತು ಪಾರ್ವತಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರುವ ಮೂಲಕ ಸಂಪನ್ನಗೊಂಡಿತು.

