ನಂಜನಗೂಡು: ರೈತರು ಕೃಷಿ ಉತ್ಪನ್ನಗಳ ವ್ಯಾಪಾರ ನಡೆಯಬೇಕಾದ ನಂಜನಗೂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣವೇ ಈಗ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಆವರಣದಾದ್ಯಂತ ಕೊಳಕು, ಗಬ್ಬುನಾರುತ್ತಿದ್ದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿ ಆವರಣಕ್ಕೆ ಎತ್ತ ನೋಡಿದರೂ ಕುಡಿದು ಬಿಸಾಡಿರುವ ಮದ್ಯದ ಬಾಟಲ್, ಪೌಚ್‌ಗಳು ರಾಶಿ ಬಿದ್ದಿವೆ. ಸ್ವಚ್ಛತೆಗೆ ಯಾವುದೇ ಗಮನವಿಲ್ಲದ ಕಾರಣ ಆವರಣದಿಂದ ದುರ್ಗಂಧ ಬರುತ್ತಿದೆ. ಬೆಳಗ್ಗೆಯಿಂದಲೇ ಕೆಲವರು ಕುಳಿತು ಕುಡಿಯುವ ದೃಶ್ಯ ಸಾಮಾನ್ಯವಾಗಿದೆ.

ತಮ್ಮ ಕೃಷಿ ಉತ್ಪನ್ನ ಮಾರಾಟಕ್ಕೆ ಬರುವ ರೈತರಿಗೆ ಈ ಸ್ಥಿತಿ ತೀವ್ರ ಮುಜುಗರ ತಂದಿದೆ. “ರೈತರಿಗಾಗಿ ಇರಬೇಕಾದ ಮಾರುಕಟ್ಟೆಗೆ ಬಂದರೆ ಕುಡುಕರ ನಡುವೆ ನಿಲ್ಲುವಂತಾಗಿದೆ. ಮಹಿಳೆಯರು, ವೃದ್ಧ ರೈತರು ಆವರಣ ಪ್ರವೇಶಿಸಲು ಭಯಪಡುವಂತಾಗಿದೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ರೈತರು ಆಗ್ರಹಿಸಿದ್ದಾರೆ. ಮಾರುಕಟ್ಟೆಗೆ ಬರುವ ವಾಹನಗಳು, ವ್ಯಾಪಾರಿಗಳು ಕೂಡ ಈ ಅಶುಚಿತ್ವ ವಾತಾವರಣದಿಂದ ಪರದಾಡುವಂತಾಗಿದೆ. ಸಂಜೆಯಾದರೆ ಕುಡುಕರ ಕೂಟ ಹೆಚ್ಚಾಗುತ್ತದೆ ಎಂಬುದು ಸ್ಥಳೀಯರ ಆರೋಪ.

ಎಪಿಎಂಸಿ ಆವರಣದ ಸ್ವಚ್ಛತೆ ಕಾಪಾಡುವುದು ಮತ್ತು ಇನ್ನಿತರ ಚಟುವಟಿಕೆಗಳನ್ನು ತಡೆಯುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿ ಉತ್ಪನ್ನಗಳ ವ್ಯಾಪಾರದ ಪವಿತ್ರ ಸ್ಥಳವನ್ನು ಕುಡುಕರ ತಾಣವಾಗಲು ಬಿಡಬಾರದು. ಎಪಿಎಂಸಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಗಸ್ತು ನಡೆಸಿ, ಸ್ವಚ್ಛತಾ ಕಾರ್ಯ ಕೈಗೊಂಡು ರೈತರಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

-ಸಿಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.