ನಂಜನಗೂಡು: ಚಲಿಸುತ್ತಿದ್ದ ಬೈಕಿಗೆ ನಾಗರಹಾವೊಂದು ಸುತ್ತಿಕೊಂಡು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ನಾಗರ ಹಾವಿಗೆ ಗಂಭೀರ ಗಾಯವಾಗಿ ಸರ್ಜರಿ ಮಾಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಹದಿನಾರುಮೂಳೆ ಗ್ರಾಮಕ್ಕೆ ಮಹದೇವಸ್ವಾಮಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಾಗರಹಾವೊಂದು ಧಿಡೀರನೆ ಬೈಕಿಗೆ ನುಗ್ಗಿದೆ. ಇದರಿಂದ ಭಯಗೊಂಡ ಬೈಕ್ ಸವಾರ ಬೈಕ್ ನಿಂದ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಆದರೆ, ನಾಗರಹಾವು ಬೈಕ್ ಕೆಳಗೆ ಸುತ್ತಿಕೊಂಡಿತ್ತು. ನಾಗರ ಹಾವಿನ ಎಡೆ ಮತ್ತು ಅದರ ಬೆನ್ನು ಭಾಗದಲ್ಲಿ ಗಂಭೀರ ಗಾಯವಾಗಿ ನರಳಾಡಿದೆ. ಕೂಡಲೇ ಮಹದೇವಸ್ವಾಮಿ ಎಚ್ಚೆತ್ತುಕೊಂಡು ಗೋಳೂರು ಸ್ನೇಕ್ ಬಸವರಾಜುರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜು ಚಾಣಾಕ್ಷತನದಿಂದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ, ನಂಜನಗೂಡಿನ ಪಶು ವೈದ್ಯಾಧಿಕಾರಿಗಳ ಆಸ್ಪತ್ರೆಗೆ ತಂದು, ಗಾಯಗೊಂಡಿದ್ದ ನಾಗರಹಾವಿಗೆ ಚಿಕಿತ್ಸೆ ನೀಡಿ ಹೊಲಿಗೆ ಹಾಕಿಸಿ ಸರ್ಜರಿ ಮಾಡಿಸಿದ್ದಾರೆ.

ಪಶು ವೈದ್ಯಾಧಿಕಾರಿಗಳಾದ ಡಾ.ಶರಣಬಸಪ್ಪ, ಕಿರಿಯ ಪಶುವೈದ್ಯಾಧಿಕಾರಿ ಯೋಗೇಶ್, ಸಿಬ್ಬಂದಿಗಳಾದ ರಾಘವೇಂದ್ರ, ಮಂಜು, ನಾಗೇಶ್ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.