ಮೈಸೂರು: ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದ್ದು, ಸರಗೂರು ತಾಲೂಕಿನ ಚಿಕ್ಕನಹಳ್ಳಿ ಅರಣ್ಯ ಬಳಿಯ ಜಮೀನೊಂದರಲ್ಲಿ ಇರಿಸಲಾಗಿದ್ದ ಬೋನಿಗೆ ಹುಲಿ ಬಿದ್ದಿದೆ.
ಮೈಸೂರು ತಾಲೂಕಿನ ಚಿಕ್ಕಕಾನ್ಯ ಬಳಿ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದ ಹಿನ್ನಲೆ ಹುಲಿ ಸೆರೆಗೆ ಹಲವು ಕಡೆ ಬೋನನ್ನು ಇರಿಸಲಾಗಿತ್ತು. ಇದೀಗ ಐದು ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಈ ಸೆರೆ ಸಿಕ್ಕ ಹುಲಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯ ಸ್ಥಳಕ್ಕೆ ಮೈಸೂರು ವೃತ್ತದ ಸಿ.ಎಫ್ ಡಾ. ಮಾಲತಿಪ್ರಿಯಾ, ಡಿ.ಸಿ.ಎಫ್ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೀಗ ಹುಲಿ ಆರೋಗ್ಯವಾಗಿರುವುದರಿಂದ ಮತ್ತು ಹುಲಿಯ ವಯಸ್ಸು ಚಿಕ್ಕದಾಗಿದ್ದರಿಂದ ಹುಲಿಯ ಚಲನವಲನ ಗಮನಿಸುವ ಸಲುವಾಗಿ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಹುಲಿಯನ್ನು ಮತ್ತೆ ಕಾಡಿಗೆ ಬಿಡಲು ನಿರ್ಧರಿಸಲಾಗಿದೆ.