ನಂಜನಗೂಡು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿ ಸರ್ಕಾರ ರಚನೆಯಾಗುತ್ತಿದೆ. ಇದರ ಬೆನ್ನಲ್ಲೇ ಕೈ ನಾಯಕರು ಟೆಂಪಲ್ ರನ್ ಶುರು ಮಾಡಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ನೂತನ ಸಚಿವ ಎಂ.ಬಿ ಪಾಟೀಲ್ ಅವರು ತಮ್ಮ ಪತ್ನಿ ಆಶಾ ಪಾಟೀಲ್ ಜೊತೆ ಭೇಟಿ ನೀಡಿ, ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು ನಂತರ ಕೆಲ ಕಾಲ ಧ್ಯಾನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಶ್ರೀಗಳ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಇಂದು ನಾನು ಶಾಸಕನಾಗಿ ಪ್ರಮಾಣ ಸ್ವೀಕರಿಸಿದ್ದೇನೆ. ಹೀಗಾಗಿ ರಾಜ್ಯದ ಸೇವೆ ಮಾಡಲು ಈ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಂ ಬಿ ಪಾಟೀಲ್ ಜೊತೆ ಕಾಂಗ್ರೆಸ್ನ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.