News Karnataka Kannada
Friday, May 10 2024
ಮೈಸೂರು

ಮೈಸೂರು-ಕುಶಾಲನಗರ ರೈಲ್ವೇ ಯೋಜನೆ: ಫೈನಲ್‌ ಲೊಕೇಷನ್‌ ಸರ್ವೆಗೆ 3ನೇ ಬಾರಿ ಟೆಂಡರ್‌ ನೀಡಿದ ಇಲಾಖೆ

Mysuru-Kushalnagar railway project: Department floats tender for final location survey for 3rd time
Photo Credit : By Author

ಮೈಸೂರು: ದಶಕಗಳಿಂದಲೂ ಪುಟ್ಟ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ. ರೈಲ್ವೇ ಇಲಾಖೆ ಈ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ ನಡೆಸುತ್ತಿದ್ದರೂ ಜನಪ್ರತಿನಿಧಿಗಳ ನಿರಾಸಕ್ತಿ, ಇಚ್ಚಾ ಶಕ್ತಿಯ ಕೊರತೆಯಿಂದ ಈ ಯೋಜನೆ ಇನ್ನೂ ಕಾಗದದಲ್ಲೇ ಉಳಿದಿದೆ. ಇದೀಗ ಮೈಸೂರು- ಕುಶಾಲನಗರ ನಡುವಿನ 87.5 ಕಿಲೋಮೀಟರ್‌ ಉದ್ದದ ರೈಲ್ವೇ ಮಾರ್ಗದ ಅಂತಿಮ ಮಾರ್ಗ ಸಮೀಕ್ಷೆಗೆ ಹೈದರಾಬಾದ್‌ ಮೂಲದ ಸಿಪ್ರಾ ಇನ್ಪ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ಟೆಂಡರ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಟೆಂಡರ್‌ ನ್ನು 1.65 ಕೋಟಿ ರೂಪಾಯಿಗಳಿಗೆ ನೀಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದರು. ಸಿಪ್ರಾ ಕಂಪೆನಿಗೆ ಸರ್ವೆ ನಡೆಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದ್ದು ಡ್ರೋನ್‌ ಕ್ಯಾಮೆರಾ ಬಳಸಿ ಸರ್ವೆ ಕಾರ್ಯ ನಡೆಸಲಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಅಂತಿಮ ಮಾರ್ಗ ಸಮೀಕ್ಷೆಗೆ ಏರಿಯಲ್‌ ಕನ್ಸ್‌ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪೆನಿಗೆ 2020 ರ ಆಗಸ್ಟ್‌ ತಿಂಗಳಿನಲ್ಲೇ 1.26 ಕೋಟಿ ರೂಪಾಯಿಗಳಿಗೆ ಟೆಂಡರ್‌ ನೀಡಿರುವುದಾಗಿ ರೈಲ್ವೇ ಅಧಿಕಾರಿಗಳು ತಿಳಿಸಿದ್ದರು. ಆದರೆ ಮಳೆಯ ಕಾರಣದಿಂದ ಮೂರು ತಿಂಗಳವರೆಗೆ ಸರ್ವೇ ಕಾರ್ಯ ನಡೆಸದ ಕಂಪೆನಿ ತನ್ನಿಂದ ಈ ಕೆಲಸ ಆಗುವುದಿಲ್ಲ ಎಂದು ಹೊರ ನಡೆದಿದೆ.

ಕಳೆದ 2019 ನೇ ಇಸವಿಯಲ್ಲಿಯೇ ಫೈನಲ್‌ ಲೋಕೇಷನ್‌ ಸರ್ವೆ ನಡೆಸಲು ಹೈದರಾಬಾದ್‌ ಮೂಲದ ಮಾತ ಕನ್ಸ್‌ಟ್ರಕ್ಷನ್ಸ್‌ ಮತ್ತು ಬಿಲ್ಡರ್ಸ್‌ ಲಿಮಿಟೆಡ್‌ ಎಂಬ ಕಂಪೆನಿ ಟೆಂಡರ್‌ ಪಡೆದುಕೊಂಡಿದ್ದು ಅದೂ ಕೂಡ ಕೆಲಸ ಮಾಡದೆ ನಿರ್ಗಮಿಸಿತ್ತು. ರೈಲ್ವೇ ಸೌಕರ್ಯ ವಂಚಿತ ರಾಜ್ಯದ ಏಕೈಕ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಈ ಜಿಲ್ಲೆಯ ರೈಲ್ವೇ ಮಾರ್ಗದ ಬೇಡಿಕೆಗೆ ದಶಕಗಳ ಇತಿಹಾಸವೇ ಇದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಏ ಸರ್ಕಾರವಾಗಲಿ ಅಥವಾ ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಾಗಲಿ ಕೊಡಗಿನ ಜನತೆಯ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಗಂಭೀರ ಪ್ರಯತ್ನವನ್ನೇ ಮಾಡಿಲ್ಲ. ಆಗೊಮ್ಮೆ ಈಗೊಮ್ಮೆ ಇದರ ಬಗ್ಗೆ ರಾಜಕಾರಣಿಗಳು ಮಾತಾಡಿದರೂ ನಂತರ ಮರೆತೇ ಬಿಡುತ್ತಾರೆ.

ಅಂದು 2009 ರಲ್ಲಿ ಕೇಂದ್ರ ರೈಲ್ವೇ ಸಹಾಯಕ ಸಚಿವರಾಗಿದ್ದ ವಿ ಮುನಿಯಪ್ಪ ಅವರು ಮೈಸೂರಿನಿಂದ ಕುಶಾಲನಗರದ ವರೆಗಿನ 88 ಕಿಲೋಮೀಟರ್ ಉದ್ದದ ರೈಲ್ವೇ ಹಳಿಯನ್ನು ನಿರ್ಮಿಸಲು ಸರ್ವೆ ಕಾರ್ಯಕ್ಕೂ ಆದೇಶಿಸಿದ್ದರು. ಇದು ಅಂದಿನ ಯುಪಿಎ ಸರ್ಕಾರದ ಬಜೆಟ್ ನಲ್ಲೂ ಈ ವಿಷಯವನ್ನು ಒಳಪಡಿಸಿದ್ದು ರಾಜ್ಯದ ಪತ್ರಿಕೆಗಳ ವರದಿಯಲ್ಲೂ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂದು ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದವು. ಸ್ವತಃ ಮುನಿಯಪ್ಪ ಅವರೆ ಕೊಡಗಿಗೆ ಭೇಟಿ ನೀಡಿದ್ದಾಗ ಈ ಬಗ್ಗೆ ಭರವಸೆಯನ್ನೂ ನೀಡಿದ್ದರು.

ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಬಿ ಎಸ್ ಯಡಿಯೂರಪ್ಪ ಅವರೂ ಕೂಡ ಕೇಂದ್ರದ ನಿರ್ಧಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಉದ್ದೇಶಿತ ರೈಲ್ವೇ ಮಾರ್ಗ ಯೋಜನೆಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ತಲಾ ಶೇಕಡಾ 50 ರಷ್ಟು ವೆಚ್ಚ ಭರಿಸಬೇಕಿದ್ದು ರಾಜ್ಯ ಸರ್ಕಾರ ತನ್ನ ಖರ್ಚಿನಲ್ಲೇ ಭೂಮಿಯನ್ನೂ ಒದಗಿಸಬೇಕಿತ್ತು. ಆದರೆ ಈ ಯೋಜನೆ ಕಾಗದದಲ್ಲೇ ಉಳಿಯಿತು. ಮೈಸೂರು -ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ತಾವು ಸಂಸದರಾಗುವುದಕ್ಕೂ ಮೊದಲು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಿಯೇ ಸಿದ್ದ ಎಂದು ಘೋಷಿಸಿದ್ದರು. ಸಂಸದರಾದ ನಂತರವೂ ಈ ಯೋಜನೆ ಜಾರಿ ಆಗಲಿದೆ ಎಂದು ಹೇಳಿದರಲ್ಲದೆ ರೈಲು ಬಾರದಿದ್ದರೆ ಮುಂದಿನ ಚುನಾವಣೆಗೂ ಸ್ಪರ್ದಿಸುವುದಿಲ್ಲ ಎಂದು ಘೋಷಿಸಿದರು. ಅದರೆ ಅವರು ಪುನಃ ರೈಲ್ವೇ ಸಂಪರ್ಕ ಕಲ್ಲಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಭರವಸೆ ನೀಡಿ ಎರಡನೇ ಬಾರಿಯೂ ಸಂಸದರಾಗಿ ಆಯ್ಕೆ ಆದರು.

ಆಮೆ ವೇಗದಲ್ಲೇ ಸಾಗುತ್ತಿರುವ ಈ ಯೋಜನೆಯ ಮೊತ್ತ ಇದೀಗ 1957 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಈ ಹಿಂದೆಯೇ ವಿವರ ಯೋಜನಾ ವರದಿಗೊಂಡಿದ್ದ ರೈಲ್ವೇ ಇಲಾಖೆ ಈ ಯೋಜನೆ ಆರ್ಥಿಕವಾಗಿ ಕಾರ್ಯ ಸಾಧುವಲ್ಲ ಎಂಬ ಕಾರಣ ನೀಡಿ ಯೋಜನೆಯನ್ನೇ ಕೈ ಬಿಡಲು ಯೋಜಿಸಿತ್ತು. ಜನತೆಯ ಒತ್ತಾಯದಿಂದ ಮತ್ತೆ ಈ ಯೋಜನೆ ತೆವಳುತ್ತಾ ಸಾಗುತ್ತಿದೆ. ಈ ಯೋಜನೆಯ ಅನುಷ್ಠಾನ ನಿಧಾನವಾದಷ್ಟೂ ವೆಚ್ಚ ಏರುತ್ತಾ ಹೋಗುತ್ತದೆ. ಈ ಫೈನಲ್‌ ಲೊಕೇಷನ್‌ ಸರ್ವೆಯ ನಂತರವಷ್ಟೆ ಎಲ್ಲೆಲ್ಲಿ ಮೇಲ್ಸೇತುವೆ , ಸೇತುವೆ, ಕ್ರಾಸಿಂಗ್‌ ಗಳು ಬರಲಿವೆ ಎಂದು ತಿಳಿಯಲಿದೆ. ಇದನ್ನು ದೆಹಲಿಯಲ್ಲಿರುವ ರೈಲ್ವೇ ಮಂಡಳಿಗೆ ಸಲ್ಲಿಸಲಾಗುತ್ತದೆ. ನಂತರ ಈ ಯೋಜನೆಯ ಒಟ್ಟು ವೆಚ್ಚವನ್ನು ನಿಗದಿಪಡಿಸಲಾಗುತ್ತದೆ.

ಇದಾದ ನಂತರ ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಬಜೆಟ್‌ನಲ್ಲಿ ಹಣ ಮೀಸಲಿರಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಈ ಯೋಜನೆ ಜಾರಿಯಾದರೆ ಕೊಡಗಿಗೆ ದೇಶಾದ್ಯಂತ ಆಗಮಿಸುವ ಲಕ್ಷಾಂತರ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದ್ದು ಬೆಂಗಳೂರು -ಕುಶಾಲನಗರದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆ ಆಗಲಿದೆ. ಈ ಮಾರ್ಗದಲ್ಲಿ ನಿತ್ಯವೂ 250 ಕ್ಕೂ ಅಧಿಕ ಸಾರಿಗೆ ಬಸ್ ಗಳು ಸಂಚರಿಸುತಿದ್ದು ಆರಾಮದಾಯಕ ಮತ್ತು ಮಿತವ್ಯಯದ ಪ್ರಯಾಣಕ್ಕಾಗಿ ಜನರು ರೈಲ್ವೇ ಕಡೆ ಮುಖ ಮಾಡಲಿದ್ದಾರೆ. ದೇಶದ ವಿವಿದಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಕುಶಾಲನಗರದವರೆಗೆ ಬರಬಹುದು ಮತ್ತು ಹಿಂತಿರುಗಬಹುದಾಗಿದೆ. . ಕೊಡಗಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಮತ್ತು ಕಾಫಿಯನ್ನು ಬಂದರಿಗೆ ಸಾಗಿಸಲೂ ಇದು ಬಹು ಉಪಯುಕ್ತವಾಗಿದೆ.ಇದರಿಂದ ರೈತರಿಗೆ ಹೊಸ ಮಾರುಕಟ್ಟೆ ದೊರೆತು ಉತ್ತಮ ಬೆಲೆ ದೊರೆಯಲಿದೆ. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬಾರದಿರಲು ರಾಜಕಾರಣಿಗಳ ಮತ್ತು ಜನತೆಯ ನಿರಾಸಕ್ತಿಯೂ ಕಾರಣವಾಗಿದೆ. ಜನಪರ ಸಂಘಟನೆಗಳು ಇನ್ನಾದರೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಮುಂದಾಗಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು