News Karnataka Kannada
Sunday, May 05 2024
ಮೈಸೂರು

ಮೈಸೂರು: ರಾಜ್ಯೋತ್ಸವಕ್ಕೆ ಆಂಗ್ಲ ಭಾಷಾ ಫಲಕಗಳು ಕಪ್ಪು ಚುಕ್ಕೆ- ಭೇರ್ಯ ರಾಮಕುಮಾರ್

Mysore/Mysuru: English language boards are a black spot for Rajyotsava celebrations: Bherya Ramkumar
Photo Credit :

ಮೈಸೂರು: ಭಾರತ ಸ್ವಾತಂತ್ರ ಪಡೆದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯೋತ್ಸವವು ವೈಶಿಷ್ಟಪೂರ್ಣವಾದುದು. ಅಮೃತ ಭಾರತಿಗೆ ಕನ್ನಡದಾರತಿ.. ಎಂದು ಬಣ್ಣಿಸಿದರೆ ಎಂತಹ ಕನ್ನಡಿಗರ ಮನಸ್ಸಿಗೂ ಅಪಾರ ಸಂತಸವಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರವತ್ತೇಳನೇ ಕನ್ನಡ ರಾಜ್ಯೋತ್ಸವಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಹಲವು ಆಂಗ್ಲ ಭಾಷಾ ಫಲಕಗಳು ಕೋರೈಸುತ್ತಿವೆ ಎಂದು ಹಿರಿಯ ಸಾಹಿತಿ,ಪತ್ರಕರ್ತ, ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಹಾಗೂ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ದೂರಿದ್ದಾರೆ.

ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ್ ಹಾನಗಲ್ ಅವರಿಗೆ ದೂರು ನೀಡಿರುವ ಅವರು ಮೈಸೂರಿನಲ್ಲಿ ಹೆಚ್ಚುತ್ತಿರುವ ಆಂಗ್ಲ ಭಾಷಾ ನಾಮಫಲಕಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರು ರೈಲ್ವೆ ನಿಲ್ಲಾಣಕ್ಕೆ ಬಂದಿಳಿಯುತ್ತಿದ್ದಂತೆ ಐ ಲವ್ ಮೈಸೂರ್ ಎಂಬ ಆಂಗ್ಲ ಭಾಷೆಯ ನಾಮಫಕಕ ಕಣ್ಣಿಗೆ ರಾಚುತ್ತದೆ. ಈ ಆಂಗ್ಲ ಫಲಕದ ಜೊತೆ ನನ್ನ ಪ್ರೀತಿಯ ಮೈಸೂರು ಎಂಬ ಕನ್ನಡ ನಾಮಫಲಕ ಅಳವಡಿಸಬೇಕೆಂಬ ಒತ್ತಾಯದ ಬಗ್ಗೆ ರೈಲ್ವೆ ಇಲಾಖೆ ಕಿವುಡಾಗಿದೆ ಎಂದವರು ದೂರಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಪ್ರತಿ ನಿತ್ಯವೂ ನೂರಾರು ಜನ ಪ್ರಯಾಣಿಕರು ಹೊರ ರಾಜ್ಯಗಳಿಂದ, ರಾಜ್ಯದ ಹಲವು ಮೂಲೆಗಳಿಂದ ಬಂದಿಳಿಯುತ್ತಾರೆ. ಅವರನ್ನ ಸ್ವಾಗತಿಸಲು ಐ ಲವ್ ಮೈಸೂರು ಫಲಕ ಅಳವಡಿಸಲಾಗಿದೆ. ಅದರ ಜೊತೆ ನನ್ನ ಪ್ರೀತಿಯ ಮೈಸೂರು ಫಲಕ ಅಳವಡಿಸುವಂತೆ ನಿರಂತರವಾಗಿ ಒತ್ತಾಯ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ವಿಮಾನ ನಿಲ್ದಾಣದ ಆಡಳಿತ ಮೂಕವಾಗಿದೆ ಎಂದವರು ಆಪಾದಿಸಿದ್ದಾರೆ.

ಮೈಸೂರು-ಹುಣಸೂರು ರಸ್ತೆಯಲ್ಲಿರುವ ಮುಕ್ತ ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿ ಕೆ.ಎಸ್.ಓ.ಯು. ಎಂಬ ಅಕ್ಷರಗಳನ್ನು ಆಂಗ್ಲ ಭಾಷೆಯಲ್ಲಿ ಅಳವಡಿಸಲಾಗಿದೆ. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುವ ಬಹುತೇಕ ಜನರು ಕರ್ನಾಟಕದ ಗ್ರಾಮೀಣ ಪ್ರದೇಶಕ್ಕೆ ಸೇರಿದವರು.ಅವರಿಗೆ ಆಂಗ್ಲ ಭಾಷೆಗಿಂತ ಕನ್ನಡ ಭಾಷೆ ಚೆನ್ನಾಗಿ ಅರ್ಥವಾಗುತ್ತದೆ.ಆದ್ದರಿಂದ ಮುಕ್ತ ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿ ಕ.ರಾ.ಮು.ವಿ. ಎಂಬ ಕನ್ನಡದ ಅಕ್ಷರಗಳನ್ನು ಅಳವಡಿಸಬೇಕೆಂಬ ಕನ್ನಡಿಗರ ಒತ್ತಾಯಕ್ಕೆ ಮುಕ್ತ ವಿ.ವಿ.ಆಡಳಿತ ಮಂಡಳಿಯು ಕುರುಡಾಗಿದೆ ಎಂದಿದ್ದಾರೆ.

ಹುಣಸೂರು ರಸ್ತೆಯ ಮುಕ್ತ ವಿಶ್ವವಿದ್ಯಾನಿಲಯದ ಬಳಿ ಇರುವ ಶ್ರೀ ವೀರೇಂದ್ರ ಹೆಗಡೆ ವೃತ್ತದ ಬಳಿ ಸೆಂಟ್ ಜೋಸೆಫ್ ಕಾಲೇಜಿನ ಜಾಹೀರಾತು ಫಲಕದಲ್ಲಿ ಶಾಲಾ ಚಟುವಟಿಕೆಗಳನ್ನು ನಿರಂತರವಾಗಿ ಆಂಗ್ಲ ಭಾಷೆಯಲ್ಲಿಯೇ ನೀಡಲಾಗುತ್ತಿದೆ. ಸದರಿ ಜಾಹೀರಾತು ಪರದೆಯ ಒಂದು ಪಾರ್ಶ್ವದಲ್ಲಿ ದಾನಿಗಳ ಹೆಸರು ಕನ್ನಡ ಭಾಷೆಯಲ್ಲಿದೆ. ಆದರೆ ಪರದೆಯ ಮೇಲೆ ದಿನಪೂರ್ತಿ ಸದರಿ ಸಂಸ್ಥೆಯ ಕಾರ್ಯ ನಿರ್ವಹಣೆ ಕುರಿತು ಆಂಗ್ಲ ಭಾಷಾ ವಿವರಣೆಗಳಿವೆ. ಸದರಿ ಸಂಸ್ಥೆಯು ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿದೆ.ಇಲ್ಲಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಖಂಡನಾರ್ಹವಾಗಿದೆ ಎಂದವರು ವಿವರಿಸಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಜಯಚಾಮರಾಜೇಂದ್ರ ಎಂಜನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿರುವ ನಗರ ಸಾರಿಗೆ ಬಸ್ ನಿಲ್ದಾಣದ ತುಂಬಲೂ ಜೆ.ಕೆ. ಟೈರ್ಸ್ ಸಂಸ್ಥೆಯ ಆಂಗ್ಲ ಭಾಷಾ ಫಲಕ ಅಳವಡಿಸಲಾಗಿದೆ.ಕನ್ನಡ ರಾಜ್ಯೋತದಸವದ ಸಂದರ್ಭದಲ್ಲಿ ಮೈಸೂರು ನಗರದ ಹಲವೆಡೆ ಕಂಡು ಬರುತ್ತಿರುವ ಓ ನಾಮಫಲಕಗಳುಇ ಕನ್ನಡ ಪ್ರೇಮಕ್ಕೆ ಕಪ್ಪು ಚುಕ್ಕೆಗಳಾಗಿವೆ ಎಂದವರು ತಿಳಿಸಿದ್ದಾರೆ.

ಮೈಸೂರಿನ ಕೃಷ್ಣರಾಜಸಾಗರ ರಸ್ತೆ ಯಲ್ಲಿರುವ ಇ.ಎಸ್.ಐ. ಆಸ್ಪತ್ರೆ ಎದುರುಗಿರುವ ಗೋಕುಲಂ ಉದ್ಯಾನ ವನದ ಬೇಲಿಗೆ ಉಚಿತವಾಗಿ ಕನ್ನಡ ಕಲಿಸಲಾಗುವುದು ಎಂದು ಪ್ರಚಾರ ಮಾಡುವ ನಾಮಫಲಕ ಸಹಾ ಆಂಗ್ಲ ಭಾಷೆಯಲ್ಲಿದೆ. ಬಹುಶಃ ಕನ್ನಡೇತರರಿಗೆ ಕನ್ನಡ. ಭಾಷೆ ಕಲಿಸಲು ಈ ಪ್ರಚಾರ ಫಲಕ ಹಾಕಲಾಗಿದೆ ಅಂದು ಭಾವಿಸಿದರೂ ಸಹ ಆಂಗ್ಲ ಭಾಷೆಯ ಜೊತೆಯಲ್ಲಿಯೇ ಕನ್ನಡ ಭಾಷೆ ಕಲಿಸಲಾಗುವುದು ಎಂದೂ ಸಹ ನಮೂದಿಸಬಹುದಿತ್ತಲ್ಲವೇ ಎಂದವರು ಪ್ರಶ್ನಿಸಿದ್ದಾರೆ.

ಈ ಎಲ್ಲಾ ನಾಮಫಲಕಗಳೂ ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾ‌ನಿ ಮೈಸೂರಿನ ಹೆಸರಿಗೆ ಧಕ್ಕೆ ತರುತ್ತಿವೆ ಎಂದು ದೂರಿನಲ್ಲಿ ತಿಳಿಸಿರುವ ಅವರು ಕೂಡಲೇ ಕ್ರಮಕೈಗೊಂಡು ಎಲ್ಲೆಡೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆದೇಶಿಸುವಂತೆ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು