Categories: ಮೈಸೂರು

ಮೈಸೂರು: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ಮಂಗಳವಾರ ಅಂಬಾವಿಲಾಸ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಸಿಂಹಾಸನ ಜೋಡಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ನವರಾತ್ರಿಗೂ ಮುನ್ನ ಭದ್ರತಾ ಕೊಠಡಿಯಲ್ಲಿರಿಸಿದ್ದ ಸಿಂಹಾಸನದ ಬಿಡಿ ಭಾಗಗಳನ್ನು ಹೊರತಂದು ಅದನ್ನು ಜೋಡಿಸಿ ಸಂಪ್ರದಾಯಬದ್ಧ ಪೂಜೆ ಬಳಿಕ ವಿಜಯದಶಮಿಯ ಎಲ್ಲ ಕಾರ್ಯಕ್ರಮಗಳನ್ನು ನೆರವೇರಿಸುವುದು ವಾಡಿಕೆ. ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್‌ನಲ್ಲಿ ರತ್ನ ಖಚಿತ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಸೆ.26ರಿಂದ ಅ.5ರವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 6ದಿನಗಳಷ್ಟೇ ಬಾಕಿ ಇರುವುದರಿಂದ ಮಂಗಳವಾರ ಶಾಸ್ತ್ರೋಕ್ತವಾಗಿ ವಿಧಿ ವಿಧಾನದಂತೆ ಸಿಂಹಾಸನ ಜೋಡಿಸಿ ದರ್ಬಾರ್‌ಗೆ ಸಿದ್ದತೆ ಮಾಡಲಾಯಿತು.

ಇದುವರೆಗೆ ಅರಮನೆಯ ಸುಪರ್ಧಿನಲ್ಲಿದ್ದ ಸಿಂಹಾಸನವನ್ನು ಪ್ರಮೋದಾದೇವಿ ಅವರು ಜಿಲ್ಲಾಡಳಿತದ ವಶಕ್ಕೆ ನೀಡಿದರು. ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂನಿಂದ ಹೊರತೆಗೆದು ಅರಮನೆ ಪಂಚಾಂಗದಂತೆ ಬೆಳಗ್ಗೆ 10.45ರಿಂದ 11.05ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಿಂಹಾಸನ ಜೋಡಣೆ ಮಾಡಲಾಯಿತು. ಇದಕ್ಕಾಗಿ ಬೆಳಗ್ಗೆ 7ರಿಂದಲೇ ವಿವಿಧ ಪೂಜಾ ಕೈಂಕರ್ಯ ಜರುಗಿದವು.

ಅರಮನೆ ಪುರೋಹಿತರ ನೇತೃತ್ವದಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಶ್ರೀ ಚಾಮುಂಡಿ ಪೂಜೆ ನೆರವೇರಿಸಿ, ನಂತರ ಪೂರ್ಣಾಹುತಿ ನೆರವೇರಿಸಲಾಯಿತು. ಅಂತಿಮವಾಗಿ ಶಾಂತಿ ಪೂಜೆ ಮಾಡಲಾಯಿತು. ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಹಾಸನದ ಜೋಡಣೆ ಕಾರ್ಯ ನಡೆಯಿತು. ನಂತರ ಪಟ್ಟದ ಕುದುರೆ, ಪಟ್ಟದ ಹಸುವನ್ನು ಕಲ್ಯಾಣಮಂಟಪದ ಸಮೀಪ ಇರುವ ಅಂಗಳಕ್ಕೆ ಕರೆತಂದು ಪೂಜಿಸಲಾಯಿತು.

ಅರಮನೆಯ ನೆಲಮಾಳಿಗೆಯಲ್ಲಿರುವ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಬಳಿಕ ಸ್ಟ್ರಾಂಗ್ ರೂಮ್‌ನಲ್ಲಿ ಇಡಲಾಗಿದ್ದ ಸಿಂಹಾಸನ ಹಾಗೂ ಭದ್ರಾಸನದ ಬಿಡಿ ಭಾಗಗಳನ್ನು ಪ್ರತ್ಯೇಕಿಸಲಾಯಿತು. ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಒಂದೊಂದೆ ಬಿಡಿ ಭಾಗವನ್ನು ದರ್ಬಾರ್ ಹಾಲ್‌ಗೆ ತರಲಾಯಿತು. ಸುಮಾರು 14 ಬಿಡಿ ಭಾಗಗಳಾಗಿ ವಿಂಗಡಿಸಲಾಗಿದ್ದ ಈ ಸಿಂಹಾಸನವನ್ನು ಜೋಡಿಸಿ, ಪರದೆ ಬಿಡಲಾಯಿತು. ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು. ಬೆಳಗ್ಗೆ ಶಾಂತಿಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಆರಂಭ ಮಾಡಿ ಕಳಶ ಸ್ಥಾಪನೆ, ಪವಿತ್ರ ಜಲ ಪ್ರೋಕ್ಷಣೆ, ಹೋಮ ಸೇರಿದಂತೆ ಪೂರ್ವ ನಿರ್ಧರಿತ ಮುಹೂರ್ತದಲ್ಲಿ ಸಿಂಹಾಸನ ಜೋಡಣಾ ಕಾರ್ಯ ಸಂಪನ್ನಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಪಾದಪೂಜೆ ನೆರವೇರಿಸಿದರು.

ಸಿಂಹಾಸನವನ್ನು 8, ಬೆಳ್ಳಿಯ ಭದ್ರಾಸನವನ್ನು 6 ಬಿಡಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸಿಂಹಾಸನದ ಬಿಡಿಭಾಗ, ಭದ್ರಾಸನ ಜೋಡಿಸಿದ ಬಳಿಕ, ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25ಜತೆ ನಗಗಳು, 1 ಜತೆ ಚಿನ್ನದ ಕುದುರೆ, ತುರಾಯಿ ಜೋಡಿ, 1ಜತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಯಿತು. ಇದರ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೆ ಸಿಂಹದ ಮುಖವನ್ನು ಅಳವಡಿಸಿದಾಗ ಸಿಂಹಾಸನ ಜೋಡಣೆ ಪೂರ್ಣಗೊಳ್ಳುತ್ತದೆ. ಸಿಂಹವನ್ನು ಸೆ.26ರಂದು ಜೋಡಿಸಿ ಪೂರ್ಣಗೊಂಡ ಸಿಂಹಾಸನವನ್ನು ದರ್ಬಾರ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. 26ರಿಂದ ಅ.5ರವರೆಗೆ ಯದುವೀರ್ ಸಿಂಹಾಸನವೇರಿ ದರ್ಬಾರ್ ನಡೆಸಲಿದ್ದಾರೆ. ಅ.20ರಂದು ಸಿಂಹಾಸನ ವಿಸರ್ಜನೆ ಮಾಡಲಾಗುತ್ತದೆ.

ಅರಮನೆಯಲ್ಲಿ ನೆರವೇರುತ್ತಿದ್ದ ಸಿಂಹಾಸನಾ ಜೋಡಣಾ ಕಾರ್ಯದಿಂದಾಗಿ ಸಾರ್ವಜನಿಕರಿಗೆ ಅರಮನೆಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಎಲ್ಲ ಕಾರ್ಯಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು. ಸಿಂಹಾಸನದ ಜೋಡಣೆ ವೇಳೆ ಪ್ರಮೋದಾ ದೇವಿ ಒಡೆಯರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

4 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

4 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

4 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

5 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

5 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

5 hours ago