ಮೈಸೂರು: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ಅದರ ವಿರುದ್ಧ ಧ್ವನಿ ಎತ್ತಿದ್ದ ಏಕೈಕ ಗಂಡು ಡಿ.ಕೆ.ಸುರೇಶ್ ಆಗಿದ್ದು, ಅನ್ಯಾಯವಾಗಿರುವುದನ್ನು ಭಾವನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳುವ ಮೂಲಕ ಸಂಸದ ಡಿ.ಕೆ.ಸುರೇಶ್ ನೀಡಿರುವ ಪ್ರತ್ಯೇಕ ದೇಶ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಸುರೇಶ್ ಹೇಳಿರುವುದರಲ್ಲಿ ನನಗೆ ಯಾವ ತಪ್ಪು ಕಾಣುತ್ತಿಲ್ಲ. ಭಾವನಾತ್ಮಕ ಆಕ್ರೋಶ ಬಂದಾಗ ಆ ರೀತಿಯ ಪದ ಬಂದಿರುವುದು ಸಹಜ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯಿಂದ ಈ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನು ಯಾವ ಸಂಸದನೂ ಪ್ರಶ್ನೆ ಮಾಡಲಿಲ್ಲ. ಪ್ರಶ್ನೆ ಮಾಡಿರುವುದು ಡಿ.ಕೆ.ಸುರೇಶ್ ಮಾತ್ರ. ಯಾಕೆ ಆ ಪ್ರಶ್ನೆ ಎತ್ತಿದರು ಎಂಬುದು ಈಗ ಚರ್ಚೆಯಾಗಬೇಕು ಎಂದು ಹೇಳಿದರು.
ಕೆರಗೋಡು ಧ್ವಜ ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ನರೇಂದ್ರ ಸ್ವಾಮಿ, ಆಡಳಿತಾತ್ಮಕವಾಗಿಯೂ ಕೆಲವು ಲೋಪವಾಗಿದೆ. ಅದನ್ನ ಕೆಲವರು ಪ್ರಚೋದನಕಾರಿಯಾಗಿ ಬಳಸುತ್ತಿದ್ದಾರೆ. ನಮಗೆ ರಾಷ್ಟ್ರ ಧ್ವಜ ಮಾತ್ರ ಮುಖ್ಯ. ಧ್ವಜ ಕಂಬದಲ್ಲಿ ಭಗಧ್ವ್ವಜ ಯಾಕೆ ಹಾಕಲು ಬಿಟ್ಟರು. ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಶಾಂತಿ ಸಭೆ ನಡೆಸಬೇಕಿದೆ. ಶಾಂತಿ ಸಭೆ ಮಾಡಲು ಸದ್ಯಕ್ಕೆ ಕಾಲ ಪಕ್ವವಾಗಿಲ್ಲ. ಶೀಘ್ರದಲ್ಲಿ ಶಾಂತಿ ಸಭೆ ಮಾಡುತ್ತೇವೆ ಎಂದರು.
ನಮಗು ಹಿಂದೂ ಧರ್ಮ ಮತ್ತು ದೇವರ ಬಗ್ಗೆ ಭಕ್ತಿ ಇದೆ. ನಾವು ಕೂಡ ಪೂಜೆ ಮಾಡಿಯೇ ಮನೆಯಿಂದ ಹೊರ ಬರುವುದು. ನಾವು ಇವರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳಿದರು.